ಕುಂದಾಪುರ: ಬಲೆಯಿಂದ ಸಮುದ್ರದ ಜೀವಿಗಳನ್ನು ಮುಕ್ತವಾಗಿ ಇಡಬೇಕು. ಸಮುದ್ರದಲ್ಲಿ ಮೀನುಗಾರರಿಂದ ಹಾನಿಗೊಳಗಾದ ಮತ್ತು ತುಂಡಾದ ಬಲೆಗಳನ್ನು ಸಂಗ್ರಹಿಸುವುದರ ಮೂಲಕ ಪರಿಸರ ಮತ್ತು ಕಡಲ ಜೀವಿಗಳ ರಕ್ಷಣೆ ಮಾಡುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ. ಸಮುದ್ರದಲ್ಲಿ ಹಾಳಾದ ಬಲೆಗಳ ಸಂಖ್ಯೆಯನ್ನು ಕಡಿಮೆ ಮಾಡಿ ಕಡಲ ತೀರದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ರೀಫ್ ವಾಚ್ ಸಂಸ್ಥೆಯ ಔಟ್ ರೀಚ್ ಆಫೀಸರ್ ವೆಂಕಟೇಶ್ ಹೇಳಿದರು.
ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಗಳು, ರೀಫ್ ವಾಚ್ ಮೆರೈನ್ ಕನ್ಸರ್ವೇಶನ್, ಎಚ್‌ಸಿಎಲ್ ಫೌಂಡೇಶನ್, ಪುರಸಭೆ ಕುಂದಾಪುರ, ಕರಾವಳಿ ಕಾವಲು ಪೊಲೀಸ್, ಕ್ಲೀನ್ ಕುಂದಾಪುರ ಮತ್ತು ಕರ್ನಾಟಕ ಅರಣ್ಯ ಇಲಾಖೆ ಇವರ ಸಹಯೋಗದಲ್ಲಿ ಕುಂದಾಪುರದ ಕೋಡಿಯ ಬ್ಯಾರಿಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಸಾಗರಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೀಫ್ ವಾಚ್ ಸಂಸ್ಥೆಯ ಸಂಯೋಜನಾಧಿಕಾರಿ ಅರ್ಪಿತ ದತ್, ಬ್ಯಾರಿಸ್ ಸಂಸ್ಥೆಯಿಂದ ಪ್ರತಿ ತಿಂಗಳ ಮೊದಲ ಭಾನುವಾರದಂದು ನಡೆಯುತ್ತಿರುವ ‘ಸ್ವಚ್ಛ ಕಡಲ ತೀರ-ಹಸಿರು ಕೋಡಿ’ ಸ್ವಚ್ಛತಾ ಅಭಿಯಾನವನ್ನು ಶ್ಲಾಘಿಸಿದರು.
ಕಡಲಾಮೆಗಳ ಸಂರಕ್ಷಣೆ ಹಾಗೂ ಗಾಯಗೊಳಗಾದ ಆಮೆಗಳಿಗೆ ಚಿಕಿತ್ಸೆ ನೀಡುವ ಕುರಿತು ಸಾಕ್ಷೃಚಿತ್ರವನ್ನು ಪ್ರದರ್ಶಿಸಲಾಯಿತು.
ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ವೆಂಕಟೇಶ್ ಎಸ್.ನಿರೂಪಿಸಿ, ಸ್ವಾಗತಿಸಿದರು.