ಅಮ್ಮತ್ತಿ ಸರ್ಕಾರಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಸ್ವಚ್ಛತೆ ಮಾಡುತ್ತಿರುವುದು. 
ಜಿಲ್ಲೆ

ಅಮ್ಮತ್ತಿ ಸರ್ಕಾರಿ ಶಾಲಾ ಆವರಣ ಸ್ವಚ್ಛತೆ

ಸಿದ್ದಾಪುರ: ಅಮ್ಮತ್ತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಜಾಗೃತಿ ಟ್ರಸ್ಟ್ ಹಾಗೂ ಸಿಸ್ಕೋ ಸಂಸ್ಥೆಯ ವತಿಯಿಂದ ಲೇಖನಿ, ಕೊಡೆ, ಕಲಿಕೋಪಕರಣಗಳು ಸೇರಿದಂತೆ ಆಹಾರದ ಕಿಟ್‌ಗಳನ್ನು ಇತ್ತೀಚೆಗೆ ಕೊಡುಗೆಯಾಗಿ ನೀಡಿ ನಂತರ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಸ್ವಚ್ಛತೆಯನ್ನು ಕೈಗೊಳ್ಳಲಾಯಿತು.

ಜಾಗೃತಿ ಮತ್ತು ಸಿಸ್ಕೋ ಸಂಸ್ಥೆಯ 125 ಸ್ವಯಂ ಸೇವಕರನ್ನೊಳಗೊಂಡ ದಾನಿಗಳ ತಂಡ ಶಾಲೆಗೆ ಆಗಮಿಸಿ ಎರಡು ದಿನಗಳವರೆಗೆ ತಂಗಿ ವಿದ್ಯಾರ್ಥಿಗಳ ಎಲ್ಲ ಪಠ್ಯಪುಸ್ತಕಗಳು ಹಾಗೂ ನೋಟ್ ಪುಸ್ತಕಗಳಿಗೆ ಬೈಂಡ್ ಹಾಕಿ ವಿದ್ಯಾರ್ಥಿಗಳಿಗೆ ನೀಡಲಾಯಿತು. ಅಲ್ಲದೆ ತರಗತಿಯ ಕೋಣೆಗಳಿಗೆ ಉಪಯುಕ್ತವಾದ ಕಲಿಕೋಪಕರಣಗಳ ಚಾರ್ಟ್‌ಗಳನ್ನು ತಯಾರಿಸಿ ನೀಡಿದರು. ಎಲ್ಲ ವಿದ್ಯಾರ್ಥಿಗಳಿಗೆ ಕೊಡೆ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿದರು.

ಶಾಲೆಯ ಮುಂದಿರುವ ಹೂ ತೋಟವನ್ನು ಸ್ವಚ್ಛಗೊಳಿಸಿ ನೂರಕ್ಕೂ ಹೆಚ್ಚು ಹೂವಿನ ಗಿಡಗಳನ್ನು ನೆಟ್ಟು ಶಾಲಾ ಅವರಣದ ಸ್ವಚ್ಛತೆ ಮಾಡಲಾಯಿತು. ಶಾಲೆಯ ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಯನ್ನು ಸುಲಭವಾಗಿ ಅಭ್ಯಾಸಿಸಲು ಅಬಾಕಸ್ ಕಲಿಕೋಪಕರಣವನ್ನು ನೀಡಿದರು. ನಂತರ ವಿದ್ಯಾರ್ಥಿಗಳ ಮನೆಗೆ ತೆರಳಿ ಪೌಷ್ಟಿಕ ಆಹಾರದ ಕಿಟ್ ಮತ್ತು ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಿ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡಿದರು.

ಸಿಸ್ಕೋ ಸಂಸ್ಥೆಯ ಮಚ್ಚಾರಂಡ ಅಯ್ಯಪ್ಪ, ಸಂಪತ್ ಬಾನಂಡ, ಕುಟ್ಟಂದಿ, ಪವನ್, ಪ್ರಶಾಂತ್, ಜಾಗೃತಿ ಟ್ರಸ್ಟ್‌ನ ಆಡಳಿತ ಅಧಿಕಾರಿ ಕಣ್ಣನ್, ಖಜಾಂಚಿಗಳಾದ ಕೊಂಡಿಂಜಮ್ಮಂಡ ಶರಣು, ನೋಯೆಲ್, ಜಾಗೃತಿ ಟ್ರಸ್ಟ್‌ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕರಾದ ರೇಣು ಅಪ್ಪಚ್ಚು ಹಾಗೂ ಶಾಲೆಯ ಮುಖ್ಯ ಶಿಕ್ಷಕಿಯವರಾದ ಎಚ್.ಎಸ್.ಸೋಮಕ್ಕ ಶಾಲಾ ಶಿಕ್ಷಕ ಅಶ್ವತ್ಥ್ ಸೇರಿದಂತೆ ಶಾಲಾ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.