ಜಿಲ್ಲೆ

10,844 ಶ್ರದ್ಧಾಕೇಂದ್ರಗಳ ಸ್ವಚ್ಛತೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯಾದ್ಯಂತ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ರಾಜ್ಯಾದ್ಯಂತ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ಕಟಿಬದ್ಧವಾಗಿದೆ. ಈ ಸಂಬಂಧ ಯೋಜನೆಯ ಕಾರ್ಯಕ್ರಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.

ಸ್ವಚ್ಛತೆ ಪರಿಕಲ್ಪನೆ ಇಲ್ಲಿಂದ ಆರಂಭಗೊಂಡರೆ ರಾಜ್ಯದ ಪ್ರತಿ ಮನೆಯಲ್ಲಿಯೂ ಜಾಗೃತಿ ಮೂಡಿಸಬಹುದೆಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ‘ಸ್ವಚ್ಛ ಶ್ರದ್ಧಾ ಕೇಂದ್ರ’ ಎಂಬ ಪರಿಕಲ್ಪನೆಗೆ ಚಾಲನೆ ನೀಡಿದರು. ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಶ್ರದ್ಧಾ ಕೇಂದ್ರಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಮುಂದೆ ಗ್ರಾಮಸ್ಥರೆಲ್ಲರೂ ಸೇರಿ ಸ್ವಚ್ಛತೆ ಕಾಪಾಡಿಕೊಳ್ಳುವ ಜನ ಸಹಭಾಗಿತ್ವದ ಈ ಕಲ್ಪನೆ ಸಾಮಾನ್ಯರಲ್ಲಿ ಬಹಳಷ್ಟು ಉತ್ಸಾಹ ಮೂಡಿಸಿದೆ. 9 ವರ್ಷಗಳಿಂದ ಮಕರ ಸಂಕ್ರಮಣ ಹಾಗೂ ಸ್ವಾತಂತ್ರೋತ್ಸವದ ವಿಶೇಷ ಸಂದರ್ಭಗಳಲ್ಲಿ ಧಾರ್ಮಿಕ ಶ್ರದಾ ್ಧಕೇಂದ್ರಗಳ ಸ್ವಚ್ಛತಾ ಅಭಿಯಾನವನ್ನು ‘ನಮ್ಮೂರು ನಮ್ಮ ಶ್ರದ್ಧಾ ಕೇಂದ್ರ’ ಧ್ಯೇಯ ವಾಕ್ಯದಡಿ ರಾಜ್ಯಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.

ರಾಜ್ಯಾದ್ಯಂತ 10,844 ಶ್ರದ್ಧಾ ಕೇಂದ್ರಗಳನ್ನು ಗುರುತಿಸಲಾಗಿದ್ದು, 2,72,235 ಸ್ವಯಂಸೇವಕರು, ದೇವಾಲಯದ ಆಡಳಿತ ಮಂಡಳಿ, ಒಕ್ಕೂಟ ಪದಾಧಿಕಾರಿಗಳು, ಜನಜಾಗೃತಿ ಸದಸ್ಯರು, ನವಜೀವನ ಸಮಿತಿ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣೆ ಸದಸ್ಯರು, ಸ್ವಚ್ಛತಾ ಸೇನಾನಿಗಳು, ಊರಿನ ಗಣ್ಯರು, ಗ್ರಾಪಂ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಿದ್ದಾರೆ. ಧಾರ್ಮಿಕ ಕೇಂದ್ರಗಳ ಪಾವಿತ್ರ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಶ್ರದ್ಧಾಕೇಂದ್ರಗಳ ಶುಚಿತ್ವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗುವುದು ಎಂದು ಧ.ಗ್ರಾ. ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ತಿಳಿಸಿದ್ದಾರೆ.

ಧಾರ್ಮಿಕ ಶ್ರದ್ಧಾ ಕೇಂದ್ರಗಳು ಗ್ರಾಮಗಳ ಪ್ರಮುಖ ಭಾಗವಾಗಿದ್ದು, ಇವುಗಳನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಪರಿಸರ ಸ್ವಚ್ಛತಾ ಮನೋಭಾವ ಸಾರ್ವತ್ರಿಕವಾಗುತ್ತದೆ. ದೇವಳದ ಗರ್ಭಗುಡಿ, ಹೊರಗಿನ ಪ್ರಾಂಗಣದಲ್ಲಿ ಸ್ವಚ್ಛತೆ ಸಂತೋಷ ತರುತ್ತದೆ. ದೇವಳಗಳು ವಿಶಾಲವಾಗಿದ್ದಲ್ಲಿ ಅವುಗಳನ್ನು ಸ್ವಚ್ಛಗೊಳಿಸಲು ಜನಸಹಭಾಗಿತ್ವದ ಅವಶ್ಯಕತೆ ಇರುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಜನಸಹಭಾಗಿತ್ವದಲ್ಲಿ ಶ್ರದ್ಧಾ ಕೇಂದ್ರಗಳ ಬೃಹತ್ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗುತ್ತಿದೆ. ಅನಿಲ್ ಕುಮಾರ್ ಎಸ್.ಎಸ್. ಧ.ಗ್ರಾ.ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ

ಕಾರ್ಯಕ್ರಮ ವಿವರ

ದೇವಸ್ಥಾನದ ಸುತ್ತಮುತ್ತಲಿನ ಗಿಡಗಂಟಿಗಳನ್ನು ಸ್ವಚ್ಛಗೊಳಿಸುವುದು, ಮಂದಿರ, ಮಸೀದಿ, ಚರ್ಚ್‌ಗಳ ಆವರಣ ಸ್ವಚ್ಛತೆ, ಒಳಾಂಗಣ ಸ್ವಚ್ಛತೆಗೆ ಆದ್ಯತೆ, ದೇವಸ್ಥಾನದ ಕಲ್ಯಾಣಿ, ಸಭಾಭವನ, ಅಶ್ವಥ ಕಟ್ಟೆ/ ಅರಳಿಕಟ್ಟೆ ಸ್ವಚ್ಛಗೊಳಿಸುವುದು, ಶ್ರದ್ಧಾ ಕೇಂದ್ರದ ಪರಿಕರಗಳನ್ನು ಸ್ವಚ್ಛಗೊಳಿಸುವುದು, ಸಾರ್ವಜನಿಕ ಶೌಚಗೃಹ, ನಗರ ಸ್ವಚ್ಛತೆ, ಬೀದಿ ಸ್ವಚ್ಛತೆಗೆ ಒತ್ತು ನೀಡಲಾಗುವುದು. ಶ್ರದ್ಧಾಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಬಟ್ಟೆಚೀಲ ಬಳಕೆ ಮಾಡುವುದು, ಜಾತ್ರೆ, ವಿಶೇಷ ಕಾರ್ಯಕ್ರಮದ ದಿನ ಸ್ವಚ್ಛತೆಗೆ ತಂಡ ರಚಿಸಿ ಜಾಗೃತಿ ಮೂಡಿಸುವುದು, ಸ್ವಚ್ಛತೆ ನಿಗಾ ವಹಿಸುವ ಸ್ವಯಂಸೇವಕರ ಕಾವಲು ಸಮಿತಿ ರಚನೆ, ಡಸ್ಟ್‌ಬಿನ್ ಇಟ್ಟು ಕಸವನ್ನು ಅಲ್ಲಿಯೇ ಹಾಕುವಂತೆ ಭಕ್ತರಿಗೆ ಸೂಚನೆ ನೀಡುವ ಫಲಕಗಳನ್ನು ಹಾಕುವುದು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಸ್ವಚ್ಛತಾ ಕಾರ್ಯ.
ಕಾರ್ಕಳ ಕೊಡಮಣಿತ್ತಾಯ ದೈವಸ್ಥಾನದಲ್ಲಿ ನಡೆದ ಸ್ವಚ್ಛತಾ