ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಚಂದ್ರಯಾನ-3ರ ಮಾದರಿ ತಯಾರಿಸಿ, ಇಸ್ರೋ ಸಂಸ್ಥೆಯ ಹೆಸರು ಪ್ರದರ್ಶಿಸಿ ದೇಶ ಭಕ್ತಿಗೀತೆ ಗಾಯನದ ಮೂಲಕ ಗೌರವಾರ್ಪಣೆ ಸಲ್ಲಿಸಲಾಯಿತು. 
ಜಿಲ್ಲೆ

ಸ್ವಚ್ಛತಾ ಕಾರ್ಯ ದೇವರ ಪ್ರಾರ್ಥನೆಗಿಂತ ಮಿಗಿಲು,ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಯ್ಯದ್ ಮಹಮ್ಮದ್ ಬ್ಯಾರಿ ಅಭಿಮತ

Mangaluru - Shravan Kumar Nala

ಮಂಗಳೂರು: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಕರಾವಳಿ ಕಾವಲುಪಡೆ, ಅರಣ್ಯ ಇಲಾಖೆ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ, ಪುರಸಭೆ ಕುಂದಾಪುರ ಸಹಯೋಗದಲ್ಲಿ ಇತ್ತೀಚೆಗೆ ಸ್ವಚ್ಛ ಕಡಲತೀರ-ಹಸಿರು ಕೋಡಿ ಅಭಿಯಾನಕ್ಕೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಯ್ಯದ್ ಮಹಮ್ಮದ್ ಬ್ಯಾರಿ ಚಾಲನೆ ನೀಡಿದರು.

ನಮ್ಮ ಪ್ರಾರ್ಥನೆ ಕೇವಲ ದೇವಾಲಯ, ಚರ್ಚ್, ಮಸೀದಿ ಮುಂತಾದ ಧಾರ್ಮಿಕ ಸ್ಥಳಗಳಲ್ಲಿ ಮಾತ್ರ ಮಾಡಿದರೆ ಸಾಲದು. ಸ್ವಚ್ಛ ಮನಸ್ಸಿನಿಂದ ಇಂಥ ಪರಿಸರ ಸ್ವಚ್ಛತಾ ಕಾರ್ಯಗಳಲ್ಲಿ ಭಾಗಿಯಾದರೆ ದೇವರ ಪ್ರಾರ್ಥನೆಗಿಂತಲೂ ಮಿಗಿಲಾದದ್ದು. ಚಂದ್ರಯಾನ-3ರ ಯಶಸ್ವಿಯ ಸಾಧನೆಯನ್ನು ವಿದ್ಯಾರ್ಥಿಗಳೆಲ್ಲರೂ ಸ್ಫೂರ್ತಿಯಾಗಿ ತೆಗೆದುಕೊಂಡು ಭವಿಷ್ಯದಲ್ಲಿ ಸಾಧನೆ ಮಾಡುವಂತೆ ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದು ಉದ್ಘಾಟನಾ ಸಮಾರಂಭದಲ್ಲಿ ಸಯ್ಯದ್ ಮಹಮ್ಮದ್ ಬ್ಯಾರಿ ಹೇಳಿದರು.

ಕರಾವಳಿ ಕಾವಲುಪಡೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಅಹ್ಮದ್ ಮುಖ್ಯ ಅತಿಥಿಯಾಗಿದ್ದರು. ಚಂದ್ರಯಾನ-3ರ ಮಾದರಿ ತಯಾರಿಸಿ, ಇಸ್ರೋ ಸಂಸ್ಥೆಯ ಹೆಸರು ಪ್ರದರ್ಶಿಸಿ ದೇಶಭಕ್ತಿಗೀತೆ ಗಾಯನದ ಮೂಲಕ ಗೌರವ ಸಲ್ಲಿಸಲಾಯಿತು. ವಿಶ್ವಸ್ಥ ಮಂಡಳಿ ಸದಸ್ಯ ಡಾ.ಆಸಿಫ್, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಕರಾವಳಿ ಕಾವಲು ಪಡೆ ಗಂಗೊಳ್ಳಿ ಠಾಣೆಯ ಅಧಿಕಾರಿ ನಂಜಪ್ಪ, ಅರಣ್ಯ ಇಲಾಖೆ ಅಧಿಕಾರಿ ಕಿರಣ್ ಬಾಬು, ಲಯನ್ಸ್ ಕ್ಲಬ್ ಕುಂದಾಪುರ ಅಧ್ಯಕ್ಷ ನವೀನ್ ಮುಂತಾದವರು ಭಾಗವಹಿಸಿದ್ದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ಅಬ್ದುಲ್ ರೆಹಮಾನ್ ವಂದಿಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜಕ ಪ್ರೊ.ಆಕಾಶ್ ಕಾರ್ಯಕ್ರಮ ನಿರೂಪಿಸಿದರು.