ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭಾನುವಾರ ಸಂಜೆ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಅವರು ಸ್ವತಃ ಭಕ್ತರ ಜತೆಗೂಡಿ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ನಡೆಸಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ದೀಪಾವಳಿ ಜಾತ್ರೆ ಹಿನ್ನೆಲೆ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಮ.ಬೆಟ್ಟದಲ್ಲಿ ಬೀಡು ಬಿಟ್ಟಿದ್ದಾರೆ. ಆಗಮಿಸಿರುವ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಸಂಬಂಧ ಪ್ರಾಧಿಕಾರ ಮುತುವರ್ಜಿ ವಹಿಸಿದೆ. ಜತೆಗೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಪಾಳಿಯದಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಸಂಜೆ ಗಸ್ತಿನಲ್ಲಿದ್ದ ಎ.ಈ ರಘು ಅವರಿಗೆ ದೇಗುಲದ ಆವರಣದ ಮುಂಭಾಗದ ರಸ್ತೆಯಲ್ಲಿ ಕಸ ಬಿದ್ದಿರುವುದು ಗಮನಕ್ಕೆ ಬಂತು. ಈ ವೇಳೆ ಕಾರ್ಯದರ್ಶಿ ಅವರು ಭಕ್ತರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ವತಃ ಪೊರಕೆ ಹಿಡಿದು ಬಿದ್ದಿದ್ದ ಕಸವನ್ನು ತೆರೆವುಗೊಳಿಸುವುದರ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು. ಅಧಿಕಾರಿಯಾಗಿದ್ದರೂ ಸರಳತೆ ಮೆರೆದು ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ನಡೆಸಿರುವುದರ ಬಗ್ಗೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು. ಈ ವೇಳೆ ಕಾರ್ಯದಲ್ಲಿ ನಿರತರಾಗಿದ್ದ ಭಕ್ತರು ಉಘೇ ಮಾದಪ್ಪ ಉಘೇ ಜಯಘೋಷವನ್ನು ಮೊಳಗಿಸಿದರು.