ಜಿಲ್ಲೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಚ್ಛತಾ ಅಭಿಯಾನ

ಮರಿದೇವ ಹೂಗಾರ

ಹುಬ್ಬಳ್ಳಿ: ವಿಆರ್​ಎಲ್ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ವಿಭಾಗ ಹಾಗೂ ಕಾರ್ವಿುಕರ ಭವಿಷ್ಯನಿಧಿ ಸಂಘಟನೆ ಕ್ಷೇತ್ರಿಯ ಕಚೇರಿ ವತಿಯಿಂದ ತಾಲೂಕಿನ ವರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ‘ಏಕ್ ತಾರೀಖ್-ಏಕ್ ಗಂಟಾ’ ಅಭಿಯಾನದಡಿ ಸ್ವಚ್ಛತಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ರಸ್ತೆ ಅಕ್ಕಪಕ್ಕದಲ್ಲಿ ಪ್ಲಾಸ್ಟಿಕ್, ನೀರಿನ ಬಾಟಲ್, ಚಹಾ ಕಪ್ ಸೇರಿದಂತೆ ವಿವಿಧ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು. ವಿಆರ್​ಎಲ್ ಹಾಗೂ ಇಪಿಎಫ್​ಒ ಸಿಬ್ಬಂದಿ ಪೊರಕೆ ಹಿಡಿದು ಕಸ ಗುಡಿಸಿದರು. ಶ್ರಮದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು. ಅಕ್ಕಪಕ್ಕದ ಜನರೂ ಕೈಗೂಡಿಸಿದರು.

ಇದಕ್ಕೂ ಮೊದಲು ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಕುಂದಗೋಳ ಶಾಸಕ ಎಂ.ಆರ್. ಪಾಟೀಲ, ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಜನರು ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಇದು ಇಡೀ ಭಾರತದ ಬದಲಾವಣೆಗೆ ಕಾರಣವಾಗಿದೆ ಎಂದರು.

ಗಾಂಧೀಜಿಯವರ ಕನಸು ನನಸು ಮಾಡುವತ್ತ ಮೋದಿ ಅವರು ಹೆಜ್ಜೆ ಹಾಕುತ್ತಿದ್ದಾರೆ. ಗಾಂಧೀಜಿ ಜನ್ಮ ದಿನ ನಿಮಿತ್ತ ಎಲ್ಲರೂ ಶಿಸ್ತಿನ ಸಿಪಾಯಿಗಳಂತೆ ಶ್ರಮದಾನದಲ್ಲಿ ಭಾಗವಹಿಸುತ್ತಿದ್ದಾರೆ. ಮೋದಿ ಅವರ ಒಂದೇ ಒಂದು ಕರೆ ಇಡೀ ದೇಶದ ಜನರಲ್ಲಿ ಜಾಗೃತಿಯನ್ನುಂಟು ಮಾಡಿದೆ. ಭಾರತ ವಿಶ್ವದಲ್ಲಿಯೇ ಮಾದರಿ ರಾಷ್ಟ್ರವಾಗಿ ಗುರುತಿಸುವಂತಾಗುತ್ತಿದೆ ಎಂದು ಗುಣಗಾನ ಮಾಡಿದರು.

ವಿಆರ್​ಎಲ್ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಎಸ್.ಜಿ. ಪಾಟೀಲ ಮಾತನಾಡಿ, ವಿಆರ್​ಎಲ್ ಕಚೇರಿಯಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಇದು ಬರೀ ವ್ಯಕ್ತಿಗಳ ಮೇಲಷ್ಟೇ ಅಲ್ಲ, ಸಮಾಜದ ಮೇಲೂ ಪರಿಣಾಮ ಬೀರುತ್ತಿದೆ. ತಾವಷ್ಟೇ ಅಲ್ಲ, ತಮ್ಮವರೂ ತಮ್ಮ ಸುತ್ತಲಿನ ಪರಿಸರ ಸುಂದರವಾಗಿ ಇಟ್ಟುಕೊಳ್ಳಲು ಪ್ರೇರೇಪಿಸುತ್ತಿದೆ ಎಂದರು. ಇದೇ ವೇಳೆ ಶಾಸಕ ಎಂ.ಆರ್. ಪಾಟೀಲ ಅವರನ್ನು ಗೌರವಿಸಲಾಯಿತು.

ಇಪಿಎಫ್​ಒ ಹುಬ್ಬಳ್ಳಿ ಪ್ರಾದೇಶಿಕ ಆಯುಕ್ತ ರಾಮಕೇಶ ಮೀನಾ, ಸಹಾಯಕ ಆಯುಕ್ತ ಬಿಜಯ್ ಪ್ರಸಾದ, ಪ್ರವರ್ತನಾಧಿಕಾರಿ ವೀರಣ್ಣ ಕುಬಸದ, ಸಹಾಯಕರಾದ ಶ್ರೀನಿವಾಸ ಪೂಜಾರಿ, ಮಂಜುನಾಥ ಜಮದಂಡಿ ಇತರರು ಇದ್ದರು.