ರಾಯಚೂರು: ನಗರದಲ್ಲಿ ಜಿಲ್ಲಾಡಳಿತ, ನಗರಸಭೆ, ಎನ್.ಎಸ್.ಬೋಸರಾಜು ೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಐದು ದಿನಗಳ ಸ್ವಚ್ಛತಾ ಅಭಿಯಾನಕ್ಕೆ ಸ್ಥಳೀಯ ವಾಲ್ಕಾಟ್ ಮೈದಾನದಲ್ಲಿ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಬುಧವಾರ ಚಾಲನೆ ನೀಡಿದರು.
ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ನಗರದಲ್ಲಿ ಡೆಂಗೆ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಯಂ ಪ್ರೇರಿತವಾಗಿ ಸ್ವಚ್ಛತೆಗೆ ಕೈಜೋಡಿಸಬೇಕು ಎಂದರು.
ನಗರಸಭೆ ಸದಸ್ಯ ಜಯಣ್ಣ ಮಾತನಾಡಿ, ನಗರದಲ್ಲಿ ಹೆಚ್ಚುತ್ತಿರುವ ಕಸವನ್ನು ನಿಯಂತ್ರಿಸಲು ಜನರು ಸಹಕರಿಸಬೇಕಾಗಿದೆ. ನಗರಸಭೆ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಸ್ವಚ್ಛತೆಗೆ ಮತ್ತಷ್ಟು ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಮುಖಂಡ ರವಿ ಬೋಸರಾಜು ಮಾತನಾಡಿ, ಸಂಘ ಸಂಸ್ಥೆಗಳು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಕಸ ವಿಲೇವಾರಿಗೆ ಮುಂದಾಗಬೇಕು. ಪಕ್ಷಬೇಧ ಮರೆತು ಎಲ್ಲರೂ ಅಭಿಯಾನಕ್ಕೆ ಕೈಜೋಡಿಸಬೇಕು. 50 ಟ್ರಾಕ್ಟರ್ ಮತ್ತು 15 ಜೆಸಿಬಿಗಳಿಂದ ಐದು ದಿನಗಳ ಕಾಲ ನಗರದ ವಿವಿಧ ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜಿಂದಪ್ಪ, ಬಸವರಾಜ ಪಾಟೀಲ್ ದರೂರು, ಬಿ.ರಮೇಶ, ಸಾಜೀದ್ ಸಮೀರ್, ತಿಮ್ಮಪ್ಪ ನಾಯಕ, ಮುಖಂಡರಾದ ಮಹ್ಮದ್ ಶಾಲಂ, ಕೆ.ಶಾಂತಪ್ಪ, ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ, ತಿಮ್ಮಾರೆಡ್ಡಿ, ಜಿ.ಬಸವರಾಜ ರೆಡ್ಡಿ, ಹರಿಬಾಬು, ಜಿ.ಸುರೇಶ ಉಪಸ್ಥಿತರಿದ್ದರು.