ಮದ್ದೂರು : ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಜ.14 ರಂದು ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ವತಿಯಿಂದ ತಾಲೂಕಿನ ಎಲ್ಲ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯೋಜನೆಯ ತಾಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಕನ್ಯಾಡಿ ಹೇಳಿದರು.
ಮದ್ದೂರು ಪಟ್ಟಣ ಒಳಗೊಂಡಂತೆ ಮದ್ದೂರು ಕಸಬಾ, ಚಿಕ್ಕ ಅರಸಿನಕೆರೆ, ಆತಗೂರು, ಕೊಪ್ಪ ಹೋಬಳಿಗಳಲ್ಲಿ ಒಟ್ಟು 800 ದೇವಾಲಯಗಳ ಸ್ವಚ್ಛತಾ ಕಾರ್ಯ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಜ.5 ರಿಂದ ದೇವಾಲಯಗಳ ಸ್ವಚ್ಛತಾ ಕಾರ್ಯ ಆರಂಭವಾಗಿದ್ದು ಸಂಕ್ರಾಂತಿ ಹಬ್ಬದವರೆಗೆ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯಲಿದೆ. ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹಸ್ವಾಮಿ, ಶ್ರೀ ವರದರಾಜ ಸ್ವಾಮಿ, ಶ್ರೀ ರಾಮ ದೇವಸ್ಥಾನ, ಶಕ್ತಿ ದೇವತೆ ಶ್ರೀ ಮದ್ದೂರಮ್ಮ, ಶ್ರೀಹೊಳೆ ಆಂಜನೇಯ ಸ್ವಾಮಿ ಹಾಗೂ ತಾಲೂಕಿನ ಶ್ರೀವೈದ್ಯನಾಥೇಶ್ವರ ಸ್ವಾಮಿ, ಚಿಕ್ಕ ಅಂಕನಹಳ್ಳಿ ಶ್ರೀನಂದಿ ಬಸವೇಶ್ವರ ದೇವಾಲಯಗಳು ಅಲ್ಲದೆ ಚಿಕ್ಕ ಅರಸಿನಕೆರೆ ಶ್ರೀಕಾಲಭೈರವೇಶ್ವರ, ಕೊಪ್ಪ ಹೋಬಳಿಯ ಆಬಲವಾಡಿ ಗ್ರಾಮದ ಶ್ರೀ ತೋಪಿನ ತಿಮ್ಮಪ್ಪ, ಮರಳಿಗ ಗ್ರಾಮದ ಶ್ರೀ ಚನ್ನಕೇಶ್ವರ ಸ್ವಾಮಿ, ಅರೆತಿಪ್ಪೂರು ಗ್ರಾಮದ ಜೈನಬಸದಿ ಸೇರಿದಂತೆ ತಾಲೂಕಿನ ಸುಮಾರು 800 ದೇವಾಲಯಗಳು ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ ಗಿಡಗಂಟಿಗಳನ್ನು ತೆರವುಗೊಳಿಸುವ ಮೂಲಕ ಪ್ರಗತಿ ಬಂಧು-ಸ್ವಸಹಾಯ ಸಂಘ ಸದಸ್ಯರುಗಳು, ಒಕ್ಕೂಟ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದರು.
ಹಣಕಾಸು ಪ್ರಬಂಧಕಿ ಆರ್.ಪುಷ್ಪಾ, ಆಡಳಿತ ಸಹಾಯಕ ಪ್ರಬಂಧಕ ಎಸ್.ಕುಮಾರ್ ಇದ್ದರು.