ವಿರಾಜಪೇಟೆ: ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ(ರಿ), ಆರ್ಜಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿರಾಜಪೇಟೆಯ ಸೇಂಟ್ ಆನ್ಸ್ ಪದವಿ ಕಾಲೇಜು ಹಾಗೂ ಕಾವೇರಿ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸ್ವಯಂಸೇವಕರು ಸ್ವಚ್ಛತಾ ಜಾಥಾದಲ್ಲಿ ಭಾಗವಹಿಸಿದ್ದರು.
ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಮಾಚಯ್ಯ ಕಾರ್ಯಕ್ರಮ ಉದ್ಘಾಟಿಸಿ ಸ್ವಚ್ಛ ಪರಿಸರ ಎಲ್ಲರ ಗುರಿಯಾಗಿದ್ದು, ಪರಿಸರ ಜಾಗೃತಿ ಎಲ್ಲರಲ್ಲಿಯೂ ಬರಬೇಕು ಎಂದು ಹೇಳಿದರು.
ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮಾ ಮಾತನಾಡಿ, ಸ್ವಚ್ಛ ಪರಿಸರದ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಾವು ಜಾಗೃತರಾದಲ್ಲಿ ಮಾತ್ರ ಸಮಾಜದ ಜಾಗೃತಿ ಸಾಧ್ಯವಾಗುತ್ತದೆ. ಪ್ಲಾಸ್ಟಿಕ್‌ಮುಕ್ತ ಪರಿಸರವನ್ನು ನಿರ್ಮಿಸಲು ಎಲ್ಲರೂ ಶ್ರಮಿಸಬೇಕೆಂದರು.
ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ ಸಂಚಾಲಕ ಶಶಿ ಅಚ್ಚಪ್ಪ ಮಾತನಾಡಿದರು.
ಎನ್‌ಎಸ್‌ಎಸ್ ಘಟಕದ ಉಭಯ ಕಾಲೇಜುಗಳ ವಿದ್ಯಾರ್ಥಿಗಳು ಆರ್ಜಿ ಅನ್ವರುಲ್ ಹುದಾ ಸಂಸ್ಥೆಯಿಂದ ಆರ್ಜಿ ಗ್ರಾಮ ಪಂಚಾಯಿತಿವರೆಗೆ ಹಾಗೂ ಆರ್ಜಿ ಗ್ರಾಮ ಪಂಚಾಯಿತಿ ಕಚೇರಿಯಿಂದ ಪೆರಂಬಾಡಿ ಚೆಕ್‌ಪೋಸ್ಟ್‌ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಬಿದಿದ್ದ ಪ್ಲಾಸ್ಟಿಕ್, ಪೇಪರ್, ಬಾಟಲಿ ಹಾಗೂ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿದರು.
ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಸಾಲ್ಡಾನ್ಹ, ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ ಕಾರ್ಯದರ್ಶಿ ಸುನೀತಾ, ಸಮಿತಿಯ ಸದಸ್ಯರು ಹಾಗೂ ಆರ್ಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕವಿತಾ, ಪಿಡಿಒ ಪಿ.ಕೆ.ಪ್ರಮೋದ್, ಕಾರ್ಯದರ್ಶಿ ರಾಜನ್, ವಿರಾಜಪೇಟೆ ಸೇಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಬಿ.ಎನ್.ಶಾಂತಿಭೂಷಣ್, ಉಪನ್ಯಾಸಕಿ ಲಿಸಿತಾ, ಕಾವೇರಿ ಪದವಿ ಕಾಲೇಜಿನ ಎನ್.ಎಸ್.ಎಸ್.ಅಧಿಕಾರಿ ಬಿ.ಬಿ.ಸುನೀಲ್ ಕುಮಾರ್, ಗ್ರಾಮಸ್ಥರು, ಪಂಚಾಯಿತಿ ಸಿಬ್ಬಂದಿ ಇದ್ದರು.