ಇಲ್ವಾವ ಬ್ಯಾಕ್ ರೆಸಾರ್ಟ್ ವತಿಯಿಂದ ಸ್ವಚ್ಛತಾ ಕಾರ್ಯ 
ಜಿಲ್ಲೆ

ಸಿದ್ದಾಪುರದಲ್ಲಿ ಸ್ವಚ್ಛತಾ ಕಾರ್ಯ

ನಾಗೇಶ ಎಸ್

ಸಿದ್ದಾಪುರ: ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನದ ಅಂಗವಾಗಿ ಸಿದ್ದಾಪುರದ ವಿವಿಧೆಡೆ ಬುಧವಾರ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಸಿದ್ದಾಪುರದ ಬಸ್ ನಿಲ್ದಾಣ, ಮೈಸೂರು ರಸ್ತೆ, ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕೈಗೊಳ್ಳುವ ಮೂಲಕ ಜಾಗೃತಿ ಮೂಡಿಸಿದರು. ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಕೆ.ಶ್ರೀನಿವಾಸ್ ಮಾತನಾಡಿ, ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಅಂಗಡಿ, ಮಳಿಗೆಗಳು, ಹೋಟೆಲ್ ಹಾಗೂ ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಘಟಕದ ವಾಹನಕ್ಕೆ ನೀಡಬೇಕೆಂದು ಮನವಿ ಮಾಡಿದರು.

ಹೋಂಸ್ಟೇ ಅಸೋಸಿಯೇಶನ್ ಡೈರೆಕ್ಟರ್ ಜೋಸೆಫ್ ಶ್ಯಾಂ ಮಾತನಾಡಿ, ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಕಸವನ್ನು ರಸ್ತೆಯಲ್ಲಿ ಎಸೆಯದೆ, ಬುಟ್ಟಿಗೆ ಹಾಕುವ ಮೂಲಕ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳನಿಸ್ವಾಮಿ ಮಾತನಾಡಿ, ಸಿದ್ದಾಪುರದ ಕಸ ವಿಲೇವಾರಿ ಘಟಕದ ಸಮಸ್ಯೆಗೆ ಶಾಸಕರು ಒಂದು ಎಕರೆ ಜಾಗವನ್ನು ಕೊಡಿಸಿದ್ದು, ಹಲವು ದಶಕಗಳ ಸಮಸ್ಯೆಗೆ ಪರಿಹಾರ ಲಭಿಸಿದೆ. ಕಾಮಗಾರಿ ನಡೆಯುತ್ತಿದ್ದು, ವರ್ತಕರು, ಸಾರ್ವಜನಿಕರು ಪಂಚಾಯಿತಿಯೊಂದಿಗೆ ಕೈ ಜೋಡಿಸಿದ್ದಲ್ಲಿ ಮಾದರಿ ಗ್ರಾಮವನ್ನಾಗಿಸಬಹುದು ಎಂದರು.

ಅಧ್ಯಕ್ಷೆ ಪ್ರೇಮಾ ಗೋಪಾಲ, ಅಭಿವೃದ್ಧಿ ಅಧಿಕಾರಿ ಆಶಾ, ಸದಸ್ಯರಾದ ಶುಕ್ಕೂರ್, ಹಸ್ಸನ್, ಕೆಪಿಸಿಸಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ವಿಜೋಯ್ ಇದ್ದರು.

ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನದ ಅಂಗವಾಗಿ ಕರಡಿಗೋಡು ಗ್ರಾಮದ ಇವಾಲ್ ಬ್ಯಾಕ್ ಸಂಸ್ಥೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಥೋಮಸ್ ಪೌಲ್ ನೇತೃತ್ವದಲ್ಲಿ ಸಂಸ್ಥೆಯ ಸಿಬ್ಬಂದಿ ಪಾಲ್ಗೊಂಡು ಗ್ರಾಮ ನೈರ್ಮಲ್ಯ ಜಾಗೃತಿ ಮೂಡಿಸಿದರು.