ಜಿಲ್ಲೆ

ಘನತ್ಯಾಜ್ಯ ಘಟಕದಿಂದ ಜೀವನ ನರಕ : ಜನಶಿಕ್ಷಣ ಟ್ರಸ್ಟ್ ಸಂವಾದದಲ್ಲಿ ಅಳಲು :

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಮುಡಿಪು ಚೆಕ್ ಪೋಸ್ಟ್ ಇರಾ ರಸ್ತೆಯಲ್ಲಿ ಸ್ವಚ್ಛತೆಗಾಗಿ ಶ್ರಮದಾನ ಶನಿವಾರ ನಡೆಯಿತು. ರಸ್ತೆಬದಿ, ಚರಂಡಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಹೆಕ್ಕಿ, ವಿಂಗಡಿಸಿ ಸ್ವಚ್ಛ ಸಂಕೀರ್ಣಕ್ಕೆ ಹಸ್ತಾಂತರಿಸಲಾಯಿತು.

ಬಳಿಕ ಜನಶಿಕ್ಷಣ ಟ್ರಸ್ಟ್ನ ಸಂವಾದದಲ್ಲಿ ಸ್ವಚ್ಛತಾ ಸೇನಾನಿ ರಮ್ಲತ್ ಮಾತನಾಡಿ, ಸಜಿಪ ಗ್ರಾಮದ ಕಂಚಿನಡ್ಕದಲ್ಲಿ ನಿರ್ಮಾಣಗೊಂಡಿರುವ ಘನತ್ಯಾಜ್ಯ ಘಟಕದಿಂದ ದುರ್ವಾಸನೆ ಬರುತ್ತಿದ್ದು, ಜೀವನ ಸಾಗಿಸುವುದೇ ಕಷ್ಟ ಎನಿಸಿದೆ. ಘಟಕ ನಿರ್ಮಾಣ ಸಂದರ್ಭ ವಿರೋಧಿಸಿ ಪ್ರತಿಭಟಿಸಿದಾಗ ಪೊಲೀಸರು ಲಾಠಿ ಪೆಟ್ಟು ಕೊಟ್ಟಿದ್ದಾರೆ ಎಂದು ಅಳಲು ವ್ಯಕ್ತಪಡಿಸಿ, ಮನವಿ ಪತ್ರ ನೀಡಿದರು.

ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾತನಾಡಿ, ಸ್ವಚ್ಛತಾ ಶ್ರಮದಾನ ಮೂಲಕ ರಸ್ತೆಬದಿ ತ್ಯಾಜ್ಯ ತೆರವುಗೊಳಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವುದಕ್ಕೆ ಕಡಿವಾಣ ಹಾಕಿ ಸ್ವಚ್ಛ, ಹಸಿರು ರಸ್ತೆ ನಿರ್ಮಾಣಕ್ಕೆ ನಿರಂತರ ಶ್ರಮದಾನ ಅಗತ್ಯ ಎಂದರು. ಕಂಚಿನಡ್ಕ ಸಮಸ್ಯೆ ಸರಿಪಡಿಸಲು ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸುವಂತೆ ಸೂಚಿಸಿದರು.

ಜನಶಿಕ್ಷಣ ಟ್ಟಸ್ಟ್, ಬಾಳೆಪುಣಿ ಗ್ರಾಪಂ., ಅಪ್ನಾ ದೇಶ್ ಸಹಯೋಗದಲ್ಲಿ ನಡೆದ ಶ್ರಮದಾನದಲ್ಲಿ ಸ್ಮೈಲ್ ಸ್ಕಿಲ್ ಸ್ಕೂಲ್ ವಿದ್ಯಾರ್ಥಿಗಳು, ಸ್ಥಳೀಯ ಸ್ವಚ್ಛತಾ ಸ್ವಯಂ ಸೇವಕರು, ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು. ಸ್ವಚ್ಛತಾ ಸೇನಾನಿಗಳಾದ ಶಮ ಪ್ರಕಾಶ್, ಇಸ್ಮಾಯಿಲ್ ಕಣಂತೂರು, ಚೇತನ್ ಕುಮಾರ್, ಕಾವೇರಿ, ಪ್ರಜ್ಞಾ, ಜನನಿ ಸೆಮಿಮಾ, ಪಂಚಾಯಿತಿ ಸಿಬ್ಬಂದಿ ಸದಾನಂದ ಸಹಕರಿಸಿದರು.