ಜಿಲ್ಲೆ

ಪಾಲಿಕೆ ಕೆರೆಗಳಲ್ಲಿ ಸ್ವಚ್ಛತಾ ಕಾರ್ಯ ಚುರುಕು

ಆರ್.ತುಳಸಿಕುಮಾರ್

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಬರುವ 8 ಕೆರೆಗಳಲ್ಲಿ ಮಂಗಳವಾರ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಹಂತ-ಹಂತವಾಗಿ ಎಲ್ಲ ಕೆರೆಗಳಲ್ಲೂ ಸ್ವಚ್ಛತೆ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ಬಿಬಿಎಂಪಿಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಿಬಿಎಂಪಿಯ ವ್ಯಾಪ್ತಿಯ ಎಲ್ಲ ವಲಯಗಳಲ್ಲಿನ ಕೆರೆಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಕೌದೇನಹಳ್ಳಿ, ಅಮೃತಹಳ್ಳಿ ಹಾಗೂ ಕೆಳಗಿನ ಭೈರಸಂದ್ರ ಕೆರೆಗಳಿಗೆ ಖುದ್ದು ಭೇಟಿ ನೀಡಿ, ಸ್ವಚ್ಛತಾ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಮಂಗಳವಾರ ತಿಳಿಸಿದ್ದಾರೆ.

ಕರೆಗಳಲ್ಲಿ ಬರುವ ಕರೆಯ ಅಂಗಳದ ಪಾದಚಾರಿ ಮಾರ್ಗದಲ್ಲಿ ಸ್ವಚ್ಛತೆ, ಕೆರೆ ಏರಿಯಲ್ಲಿ ಕಳೆ ತೆಗೆಯುವುದು, ಕೆರೆ ನೀರಿನಲ್ಲಿ ಜೊಂಡು ತೆಗೆಯುವುದು, ಒಳಹರಿವು ಸ್ವಚ್ಛತೆಗೊಳಿಸುವ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಸ್ವಚ್ಛತಾ ಅಭಿಯಾನವು ಈ ವಾರ ಪೂರ್ತಿ ನಡೆಯಲಿದ್ದು, ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಸಮರ್ಪಕವಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದಿದ್ದಾರೆ.

8 ಕರೆಗಳಲ್ಲಿ ಸ್ವಚ್ಛತೆ:

ಪಾಲಿಕೆ ವ್ಯಾಪ್ತಿಯಲ್ಲಿನ ಎಂಟೂ ವಲಯಗಳಲ್ಲಿ ಒಂದೊಂದು ಕೆರೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅದರನ್ವಯ ಗೌಡನಪಾಳ್ಯ, ಕೆಳಗಿನ ಬೈರಸಂದ್ರ, ನಾಯಂಡನಹಳ್ಳಿ, ಕೌದೇನಹಳ್ಳಿ, ದೊರೆಕೆರೆ, ಅಮೃತಹಳ್ಳಿ, ಚೊಕ್ಕಸಂದ್ರ, ಅಗರ ಹಾಗೂ ಉಲ್ಲಾಳ ಕರೆ ಸೇರಿ 8 ಕೆರೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಗಿದೆ. ಅದಕ್ಕಾಗಿ 175 ಸಿಬ್ಬಂದಿ, 13 ಟ್ರ್ಯಾಕ್ಟರ್ ಹಾಗೂ 4 ಜೆಸಿಬಿ ಯಂತ್ರಗಳನ್ನು ಬಳಸಿಕೊಳ್ಳಲಾಗಿದೆ ಎಂದು ಪ್ರೀತಿ ಗೆಹ್ಲೋಟ್ ಹೇಳಿದ್ದಾರೆ.