ಜಿಲ್ಲೆ

ಸ್ವಚ್ಛತಾ ಸೇವೆ, ಪ್ರಜಾಪ್ರಭುತ್ವ ದಿನಕ್ಕೆ ನಾನಾ ಚಟುವಟಿಕೆ, ಆಡಳಿತ ಯಂತ್ರಾಂಗದ ಸಿದ್ಧತೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸೆ. 14 ರಿಂದ ಅ.1 ರವರೆಗೆ ಚ "ಸ್ವಚ್ಛತೆಯೇ ಸೇವೆ"  ಕಾರ್ಯಕ್ರಮ ಮತ್ತು ಅಮ್ಮನ ಹೆಸರಿನಲ್ಲಿ ಪ್ರತಿಯೊಬ್ಬರೂ ಗಿಡ ನೆಡುವುದು ಸೇರಿದಂತೆ ಸ್ವಚ್ಛತಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು  ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ. 

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ. 14 ರಿಂದ

ಅ.1 ರವರೆಗೆ ನಡೆಯಲಿರುವ ಸ್ವಚ್ಛತಾ ಹಿ ಸೇವಾ

ಕಾರ್ಯಕ್ರಮದಡಿ ಜಿಲ್ಲೆಯಲ್ಲಿ  ವಿವಿಧ ಚಟುವಟಿಕೆಯನ್ನು ಕೈಗೊಳ್ಳಲಾಗಿದೆ. ಸ್ವಭಾವ ಸ್ವಚ್ಛತೆ ಮತ್ತು ಸಂಸ್ಕಾರ ಸ್ವಚ್ಛತೆ ಎಂಬುದು ಕಾರ್ಯಕ್ರಮದ ಘೋಷವಾಕ್ಯವಾಗಿದೆ. ಇದು ನಗರ ಮತ್ತು ಗ್ರಾಮೀಣ ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಯೇ ಸೇವೆ  ಆಂದೋಲನದ ರೂಪದಲ್ಲಿ ನಾಲ್ಕು ಭಾಗಗಳಲ್ಲಿ ನಡೆಯಲಿದೆ. ಇದರಲ್ಲಿ ಗಿಡಗಳನ್ನು ನೆಡುವುದು, ಸ್ಥಳೀಯ ನೃತ್ಯ ಸೇರಿದಂತೆ ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸುವುದು, ಸಾರ್ವಜನಿಕ ಕಚೇರಿ ಮತ್ತು ಶೌಚಾಲಯ,ಉದ್ಯಾನಗಳ ಸ್ವಚ್ಛತೆ ಹಾಗೂ ಅಮ್ಮನ ಹೆಸರಿನಲ್ಲಿ ಪ್ರತಿಯೊಬ್ಬರೂ ಒಂದು ಗಿಡ ನೆಡುವ ಕಾರ್ಯಕ್ರಮಗಳು ಸೇರಿವೆ.  ಪೌರ ಕಾರ್ಮಿಕರ, ಸಫಾಯಿ ಕರ್ಮಚಾರಿಗಳ ಆರೋಗ್ಯ ತಪಾಸಣೆ, ಅ.2 ರ ಗಾಂಧೀ ಜಯಂತಿ ದಿನದಂದು ಸ್ವಚ್ಛತಾ ದಿವಸ್ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಬೃಹತ್ ಮಾನವ ಸರಪಳಿ ಕಾರ್ಯಕ್ರಮವನ್ನು ಸಂಪೂರ್ಣ ಯಶಸ್ವಿಗೊಳಿಸಲು ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.    

ಪ್ರಜಾಪ್ರಭುತ್ವ ದಿನದಂದು ಬೀದರ್ ನಿಂದ ಚಾಮರಾಜನಗರದವರೆಗೂ 2500 ಕಿ.ಮೀ ಉದ್ದದ ಮಾನವ ಸರಪಳಿ‌ ನಿರ್ಮಿಸುವ ಮೂಲಕ‌ ವಿಶಿಷ್ಟವಾಗಿ ಕಾರ್ಯಕ್ರಮವನ್ನು ಆಚರಿಸುತ್ತಿದ್ದು  ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೊಡಕು ಹೊಸಹಳ್ಳಿ ಯಿಂದ ಕೋಲಾರ ಜಿಲ್ಲೆಯ ಗಡಿಭಾಗ, ಚಿಕ್ಕಬಳ್ಳಾಪುರ ಜಿಲ್ಲೆಯ ಹೆಚ್.ಕ್ರಾಸ್ ವರೆಗೆ 47.5 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಾಣವಾಗಲಿದೆ.  ಇದರಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸ್ವಯಂ ಸೇವಾ ಮತ್ತು ಸಂಘ ಸಂಸ್ಥೆಗಳು, ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಲಿದ್ದು ಇದಕ್ಕೆ  ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಹಲವು ಸಭೆಗಳನ್ನು ನಡೆಸಿ, ಪೂರ್ವ  ಸಿದ್ಧತೆಗಳ ಯೋಜನೆ ರೂಪಿಸಲಾಗಿದೆ. ಪ್ರತಿ ಒಂದು ಕಿ.ಮೀ ಗೆ ಒಂದರಂತೆ ಸಸಿ ನೆಟ್ಟು ನೀರೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.