ಸಕಲೇಶಪುರ: ಪೌರಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಪುರಭವನದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೌರಕಾರ್ಮಿಕರಿಲ್ಲದ ಪಟ್ಟಣವನ್ನು ಉಹಿಸಿಕೊಳ್ಳುವುದು ಅಸಾಧ್ಯ. ಪಟ್ಟಣದ ಸ್ವಚ್ಛತೆಯನ್ನು ಒಂದು ವಾರ ನಡೆಸದಿದ್ದರೆ ಆ ಊರು ರೋಗಗಳ ತವರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ, ಪೌರಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಮೂಲಕ ಅವರ ಆತ್ಮಗೌರವಕ್ಕೆ ಕುಂದು ಬಾರದಂತೆ ನಡೆದುಕೊಳ್ಳಬೇಕು. ಪೌರಕಾರ್ಮಿಕರು ದುಶ್ಚಟಗಳಿಂದ ದೂರ ಇದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.
ಅರ್ಧ ದಶಕದಿಂದ ನನೆಗುದಿಗೆ ಬಿದ್ದಿರುವ ಪೌರಕಾರ್ಮಿಕರ ವಸತಿಗೃಹಗಳ ಕಾಮಗಾರಿಯನ್ನು ಶೀಘ್ರವೇ ಮುಗಿಸಿ ಹಸ್ತಾಂತರಿಸಲಾಗುವುದು. ದಿನಗೂಲಿ ನೌಕರರ ಖಾಯಂಗೆ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ ಎಂಬ ಭರವಸೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಪುರಭವನದವರೆಗೆ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಸ್ವಚ್ಛತೆಯಲ್ಲಿ ತೊಡಗಿರುವ ಎಲ್ಲ ಪೌರಕಾರ್ಮಿಕರನ್ನೂ ಸನ್ಮಾನಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ, ಪುರಸಭೆ ಸದಸ್ಯರಾದ ಉಮೇಶ್, ಸರಿತಾ ಗಿರೀಶ್, ಜ್ಯೋತಿ ಮುಂತಾದವರಿದ್ದರು.