ಜಿಲ್ಲೆ

1.50 ಲಕ್ಷ ಜನರಿಗೆ ಶುದ್ಧಜಲ ಬಳಕೆ ಜಾಗೃತಿ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ರಾಜ್ಯಾದ್ಯಂತ ಜನವರಿ ತಿಂಗಳಲ್ಲಿ ಶುದ್ಧಜಲ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ 1.50 ಲಕ್ಷ ಜನರಿಗೆ ಶುದ್ಧಜಲ ಬಳಕೆಯ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್‌ಎಸ್.ಎಸ್ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಧಿಕ ಜನಸಂಖ್ಯೆ ಹಾಗೂ ಪರಿಸರ ನಾಶದ ಪರಿಣಾಮದಿಂದ ನೀರಿನ ಅಭಾವ ತಲೆದೋರಿದ್ದು, ಶುದ್ಧ ಕುಡಿಯುವ ನೀರನ್ನು ಜನರಿಗೆ ಪೂರೈಸುವುದು ಕಷ್ಟಕರವಾಗಿ ಪರಿಣಮಿಸಿದೆ. ರಾಜ್ಯದ ಹಲವಾರು ಹಳ್ಳಿಗಳಲ್ಲಿ ಜನರು ಇಂದೂ ಕೂಡ ಅಶುದ್ಧ ನೀರನ್ನು ಕುಡಿಯುತ್ತಿರುವುದು ಕಾಣುತ್ತೇವೆ. ರಾಜ್ಯದ ಶೇ.60ರಷ್ಟು ಪ್ರದೇಶಗಳಲ್ಲಿ ಕುಡಿಯುವ ನೀರಿನಲ್ಲಿ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್, ಶೇ.20ರಷ್ಟು ಅಧಿಕ ನೈಟ್ರೇಟ್ ಹಾಗೂ ಶೇ.30ರಷ್ಟು ಸೂಕ್ಷ್ಮಾಣುಗಳಿಂದ ಕಲುಷಿತವಾಗಿ ಜನರು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ.

ರಾಜ್ಯದ ಹೆಚ್ಚಿನ ತಾಲೂಕುಗಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ. ರಾಜ್ಯದ ವಿವಿಧೆಡೆಯಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಂದ ಫ್ಲೋರೈಡ್ ಹಾಗೂ ಅಶುದ್ಧ ನೀರಿನಿಂದಾಗುತ್ತಿರುವ ಸಮಸ್ಯೆಯನ್ನು ಕೇಳಿ ತಿಳಿದುಕೊಂಡ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕರ್ನಾಟಕದಲ್ಲಿ ಪ್ರಥಮವಾಗಿ ಸಮುದಾಯ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡುವ ನಿರ್ಧಾರ ಕೈಗೊಂಡರು. 2009ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿಯಲ್ಲಿ ಮೊದಲ ಶುದ್ಧಕುಡಿಯುವ ನೀರಿನ ಘಟಕವನ್ನು ಹೇಮಾವತಿ ವೀ. ಹೆಗ್ಗಡೆಯವರು ಲೋಕಾರ್ಪಣೆ ಮಾಡಿದ್ದಾರೆ ಎಂದರು.

ನಿತ್ಯ 5.55 ಲಕ್ಷ ಜನರಿಗೆ ಪ್ರಯೋಜನ

ಶುದ್ಧಗಂಗಾ ಎಂಬ ಹೆಸರಿನಲ್ಲಿ ಇದುವರೆಗೆ ರಾಜ್ಯಾದ್ಯಂತ 481 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಪ್ರತಿನಿತ್ಯ ಸುಮಾರು 5,55,000 ಜನರು ಶುದ್ಧ ನೀರನ್ನು ಬಳಸುತ್ತಿದ್ದಾರೆ. ಇದಕ್ಕಾಗಿ ಪ್ರತಿದಿನ 22 ಲಕ್ಷ ಲೀಟರ್ ಶುದ್ಧ ಕುಡಿಯುವ ನೀರನ್ನು ಈ ಘಟಕಗಳ ಮೂಲಕ ನೀಡಲಾಗುತ್ತಿದೆ.

ಯೋಜನೆಯ ಈ ಮಹತ್ವಕಾಂಕ್ಷೆ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಗಳೂ ಕೈ ಜೋಡಿಸಿವೆ. ಶುದ್ಧ ಜಲ ಬಳಕೆಯ ಕುರಿತಂತೆ ಜನ ಸಾಮಾನ್ಯರಿಗೆ ಅರಿವಿನ ಕೊರತೆಯಿದೆ. ಇದಕ್ಕಾಗಿ ಜನವರಿ ತಿಂಗಳಾದ್ಯಂತ ಶುದ್ಧಜಲ ಜಾಗೃತಿ ಅಭಿಯಾನವನ್ನು ಶುದ್ಧಗಂಗಾ ಘಟಕಗಳಿರುವ ಪ್ರದೇಶದ ಜನರಿಗೆ ಆಯೋಜಿಸಲಾಗುತ್ತಿದೆ.

ಶಾಲಾ ಮಕ್ಕಳಿಗೆ ಮಾಹಿತಿ, ಜಾಥಾ ಕಾರ್ಯಕ್ರಮ, ಕರಪತ್ರ ಹಂಚಿಕೆ, ಬೀದಿನಾಟಕ, ಸಾರ್ವಜನಿಕ ಮಾಹಿತಿ ಕಾರ್ಯಕ್ರಮ, ಒಕ್ಕೂಟ ಸಭೆಗಳು ಹಾಗೂ ಜ್ಞಾನವಿಕಾಸ ಕೇಂದ್ರಗಳಲ್ಲಿ ಮಾಹಿತಿ ಹಾಗೂ ಮನೆಮನೆಗೆ ತೆರಳಿ ನೋಂದಣಿ ಮೊದಲಾದ 500ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಘಟಕ ಮೇಲ್ವಿಚಾರಕರು, ಪ್ರೇರಕರು, ಸ್ಥಳೀಯ ಕಾರ್ಯಕರ್ತರು ಹಾಗೂ ಪ್ರಗತಿ ಬಂಧು ಒಕ್ಕೂಟದ ಸದಸ್ಯರು ತೊಡಗಿಕೊಳ್ಳಲಿದ್ದಾರೆ ಎಂದು ಅನಿಲ್ ಕುಮಾರ್‌ಎಸ್.ಎಸ್.ತಿಳಿಸಿದ್ದಾರೆ.