ಕೆ.ಕೆಂಚಪ್ಪ ಮೊಳಕಾಲ್ಮೂರು: ರಂಗಯ್ಯನದುರ್ಗ ಜಲಾಶಯದಿಂದ ಪಟ್ಟಣಕ್ಕೆ ಸರಬರಾಜು ಆಗುತ್ತಿರುವ ನೀರು ಶುದ್ಧೀಕರಣವಾದರೂ ಪರಿಸ್ಥಿತಿ ಬಿನ್ನವಾಗಿರುವ ಕಾರಣ ಡ್ಯಾಂ ನೀರು ಕುಡಿಯಲು ಬಳಸದಂತೆ ಸ್ಥಳೀಯ ಪಪಂ ಅಧಿಕಾರಿಗಳು ಜಾಗೃತಿ ಮೂಡಿಸುವಲ್ಲಿ ನಿರತರಾಗಿದ್ದಾರೆ.
ಕವಾಡಿಗರಹಟ್ಟಿಯ ಗಂಭೀರ ಪ್ರಕರಣ ಜನರನ್ನ ಬೆಚ್ಚಿ ಬೀಳಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪಪಂ ಅಧಿಕಾರಿಗಳು ಎಚ್ಚೆತ್ತು ಶುದ್ಧ ನೀರು ಪೂರೈಕೆಗೆ ಆದ್ಯತೆ ಕೊಟ್ಟಿದ್ದಾರೆ.
ಡ್ಯಾಂ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ನಾಗರಿಕರ ಆರೋಪ ಹಿನ್ನೆಲೆ ನೀರು ಪರೀಕ್ಷೆಯಲ್ಲಿ ಪಾಸಿಟೀವ್ ವರದಿ ಬಂದರೂ ವರ್ಷಗಟ್ಟಲೇ ನಿಂತ ನೀರು ಪಾಚಿಕಟ್ಟಿ ಹಸಿರಿನ ವಾತಾವರಣಕ್ಕೆ ತಿರುಗಿರುವ ಕಾರಣ ಜನ ಭಯ ಬೀತರಾಗಿದ್ದಾರೆ. ಇದನ್ನ ಅರಿತ ಅಧಿಕಾರಿಗಳು ಕಳೆದ ವಾರದಿಂದ ಡ್ಯಾಂ ನೀರನ್ನ ಅನ್ಯ ಬಳಕೆಗೆ ಮಾತ್ರ ಉಪಯೋಗಿಸಿ ಆದಷ್ಟು ಶುದ್ಧ ನೀರಿಗೆ ಆದ್ಯತೆ ಕೊಡಬೇಕು ಎಂದು ಜಾಗೃತಿ ಮೂಡಿಸುವಲ್ಲಿ ತೊಡಗಿದ್ದಾರೆ.
ಲಭ್ಯವಿರುವ 21 ಕೊಳವೆ ಬಾವಿ ನೀರು ಬಳಕೆಗೆ ಕ್ರಮ ವಹಿಸಲಾಗಿದೆ. ಮಳೆಯ ಅಭಾವ ಇದೇ ರೀತಿ ಮುಂದುವರಿದರೆ ದಿನ ಕಳೆದಂತೆ ಏರುತ್ತಿರುವ ಬಿಸಿಲಿನ ತಾಪ ಅಂತರ್ಜಲ ಕುಸಿತದಿಂದ ಫ್ಲೋರೈಡ್ ನೀರಿನ ಆವಾಂತರ ಸೃಷ್ಠಿಯಾಗಲಿದೆ. ಇನ್ನು ಕೆರೆ, ಕಟ್ಟೆಗಳ ನೀರು ಸಹಿತ ಮಲಿನವಾಗುವ ಪರಿಸ್ಥಿತಿಯಲ್ಲಿವೆ ಎಂಬ ಮಾತಿದೆ.
ಮೇಲಾಧಿಕಾರಿಗಳ ಸೂಚನೆ:
ತಾಲೂಕಿನ 16 ಗ್ರಾಪಂ ವ್ಯಾಪ್ತಿಯಲ್ಲಿ 95 ಗ್ರಾಮಗಳಿವೆ. 121 ಓವರ್ ಹೆಡ್ ಟ್ಯಾಂಕ್, 276 ಮಿನಿ ಟ್ಯಾಂಕ್, 201 ಜಾನುವಾರು ತೊಟ್ಟಿ, 80 ಶುದ್ಧ ಕುಡಿಯುವ ನೀರಿನ ಆರ್‌ಒ ಪ್ಲಾಂಟ್ ಈಗಾಗಲೇ ಸ್ವಚ್ಛಗೊಳಿಸಲಾಗಿದೆ. ಒಂದು ಮಿನಿ ಟ್ಯಾಂಕ್ ಹಾಗೂ 4 ಆರ್‌ಒ ಪ್ಲಾಂಟ್ ದರಸ್ತಿಯಲ್ಲಿವೆ. ಚರಂಡಿ, ತಿಪ್ಪೇಗುಂಡಿ ಹಾಗೂ ಶಾಲಾ, ಕಾಲೇಜು ಸುತ್ತ, ಮುತ್ತ ಸ್ವಚ್ಛತೆ ವಾತಾವರಣ, ಶುದ್ಧ ನೀರು ಕೊಡುವ ವ್ಯವಸ್ಥೆಗೆ ಗ್ರಾಪಂ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.
ನಾಗಸಮುದ್ರ ಪ್ರಕರಣ:
ಕಳೆದ ಜುಲೈ ತಿಂಗಳಲ್ಲಿ ನಾಗಸಮುದ್ರದಲ್ಲಿ ಕಲುಷಿತ ನೀರು ಸೇವೆಯಿಂದ ಅತಿಸಾರ ವಾಂತಿ-ಭೇದಿಗೆ ತುತ್ತಾದ 141 ಜನ ಸೂಕ್ತ ಚಿಕಿತ್ಸೆ ಪಡೆದು ಗುಣ ಮುಖರಾಗಿದ್ದಾರೆ. ಎಚ್ಚೆತ್ತುಕೊಂಡ ಅಧಿಕಾರಿಗಳು ಗ್ರಾಮದ ನೀರಿನ ಪೈಪ್‌ಲೈನ್, ಟ್ಯಾಂಕರ್ ಹಾಗೂ ಪ್ರತಿ ಮನೆಯ ನೀರಿನ ತೊಟ್ಟಿಗಳನ್ನ ಸ್ವಚ್ಛಗೊಳಿಸಲು ಕ್ರಮವಹಿಸಿದ್ದರು.
ನೊಣಗಳ ಹಾವಳಿ:
ಮೊಳಕಾಲ್ಮೂರು, ರಾಯಾಪುರ, ಗುಂಡ್ಲೂರು, ಮರ‌್ಲಹಳ್ಳಿ, ಕೋನಸಾಗರ, ಕೊಂಡ್ಲಹಳ್ಳಿ, ಹಾನಗಲ್, ಸೂಲೇನಹಳ್ಳಿ, ಬಿಜಿಕೆರೆ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ಕೋಳಿ ಫಾರಂಗಳಿಂದ ನೊಣಗಳ ಹಾವಳಿ ಹೆಚ್ಚಿದೆ. ಇದರಿಂದ ಹತ್ತಿರದ ಗ್ರಾಮದ ಜನ ಬೇಸತ್ತಿದ್ದಾರೆ. ಶಾಲಾ, ಕಾಲೇಜು ಮಕ್ಕಳಿಗಂತೂ ನಿತ್ಯ ಕಿರಿಕಿರಿ ತರಿಸುತ್ತಿದೆ ತಾಲೂಕಾಡಳಿತ ಈ ಬಗ್ಗೆ ಕಠಿಣ ನಿಲುವು ತಗೆದುಕೊಳ್ಳಬೇಕಿದೆ.
*ನಾಗಸಮುದ್ರ ಹಾಗೂ ದುರ್ಗದ ಕವಾಡಿಗರಹಟ್ಟಿ ಪ್ರಕರಣ ಗಂಭೀರತೆ ಮನಗಂಡು ಪ್ರತಿ ಗ್ರಾಮದಲ್ಲಿ ಸ್ವಚ್ಛತೆ ಕ್ರಮಗಳ ಜಾಗೃತಿಗೆ ಒತ್ತು ಕೊಡಲಾಗಿದೆ. ಆಯಾ ಗ್ರಾಮದ ಕೊಳುವೆ ಬಾವಿ ನೀರನ್ನ ಪರೀಕ್ಷಿಸಿಸಲಾಗುತ್ತಿದೆ. ಆದಷ್ಟು ಕಾಸಿ, ಆಡಿಸಿದ ನೀರು ಸೇವನೆ ಸೂಕ್ತ. ಅಶುದ್ಧ ಎಂದು ಕಂಡು ಬಂದರೆ ಟ್ಯಾಂಕರ್ ನೀರು ಕೊಡಬೇಕೆಂದು ಗ್ರಾಪಂ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಎಲ್ಲ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.
ಡಾ.ಮಧುಕುಮಾರ್ ಟಿಎಚ್‌ಒ
*ಡ್ಯಾಂ ನೀರು ಪರೀಕ್ಷೆಯಲ್ಲಿ ಪಾಸಿಟೀವ್ ವರದಿ ಬಂದರೂ ಸೇವನೆ ಮತ್ತು ಅಡುಗೆಗೆ ಬಳಸಬಾರದು. ಹತ್ತಿರದ ಆರ್‌ಒ ಪ್ಲಾಂಟ್ ನೀರು ಬಳಸುವಂತೆ ಸೂಚಿಸಲಾಗಿದೆ.
ಇ.ಲೀಲಾವತಿ, ಪಪಂ ಮುಖ್ಯಾಧಿಕಾರಿ
*ಗ್ರಾಮದ ಸುತ್ತ ಹಾಗೂ ಶಾಲೆಗಳ ಹತ್ತಿರ ತಿಪ್ಪೇಗುಂಡಿ ಇರಬಾರದು. ಚರಂಡಿಗೆ ಆಗಾಗ ಬ್ಲಿಚಿಂಗ್ ಪೌಡರ್ ಹಾಗೂ ಫಿನಾಯಿಲ್ ಸಿಂಪರಣೆ ಮಾಡಬೇಕು. ತಗ್ಗು, ಗುಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಪಿಡಿಒಗಳಿಗೆ ಸೂಚನೆ ಕೊಡಲಾಗಿದೆ.
ಗಣೇಶ್ ತಾಪಂ ಪ್ರಭಾರ ಇಒ