Clean water for every house from Jalotsava 
ಜಿಲ್ಲೆ

ಜಲೋತ್ಸವದಿಂದ ಪ್ರತೀ ಮನೆಗೆ ಶುದ್ಧ ಜಲ

Vijayapura - Desk - Doddanagouda Gudihindin

ಬೀಳಗಿ: ನೀರು, ಆಹಾರ, ಗಾಳಿ ಎಲ್ಲವೂ ಕಲುಷಿತವಾಗಿದ್ದು, ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣ ಜಲೋತ್ಸವ ಯೋಜನೆ ಪ್ರಮುಖ ಉದ್ದೇಶ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಪಟ್ಟಣದ ಮಿನಿವಿಧಾನ ಸೌಧ ಆವರಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಜಲಜೀವನ್ ಮಿಷನ್ ಯೋಜನೆಯಡಿ 650.17 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಜಿಲ್ಲೆಯ ಬಾಗಲಕೋಟೆ, ಬೀಳಗಿ, ಬಾದಾಮಿ, ಗುಳೇದಗುಡ್ಡ ಮತ್ತು ಮುಧೋಳ ತಾಲೂಕಿನ ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಜಾಕವೆಲ್ ಮತ್ತು ಜಲಶುದ್ಧೀಕರಣ ಘಟಕ ಹಾಗೂ ಇತರ ಜಲಸಂಗ್ರಹಾಲಯ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ದಿವಾಳಿಯಾಗಿದೆ ಎಂದು ದಾರಿ ತಪ್ಪಿಸುವ ಕೆಲಸದಲ್ಲಿ ನಿರತವಾಗಿರುವ ವಿರೋಧ ಪಕ್ಷದ ಮುಖಂಡರಿಗೆ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕವಾಗಿ ಸಬಲರಾಗಿದ್ದೇವೆ ಎಂದು ಲಾನುಭವಿಗಳೇ ಉತ್ತರ ನೀಡಬೇಕು. ಅನುದಾನ ತೆಗೆದು ಇರಿಸದೆ ಬಿಜೆಪಿ ಸರ್ಕಾರ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಿತ್ತು. ಅದಕ್ಕೆ ನಮ್ಮ ಸರ್ಕಾರ ಹಣ ಕೊಡಬೇಕಾಗಿದೆ ಎಂದು ಹೇಳಿದರು.

ಶಾಸಕ ಜೆ.ಟಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಪಂ ಸದಸ್ಯರಿಗೆ ಇರುವಷ್ಟು ಅಧಿಕಾರ ಮತ್ತೊಬ್ಬ ಜನಪ್ರತಿನಿಧಿಗೆ ಇಲ್ಲ. ಆದರೂ ಅದರ ಪರಿಪೂರ್ಣ ಜವಾಬ್ದಾರಿ ಸದಸ್ಯರು ಅರಿತುಕೊಳ್ಳದೆ ಇರುವುದು ಗ್ರಾಮಗಳ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಜಿಪಂ ಸಿಇಒ, ಡಿಸಿ ಅವರು ಗ್ರಾಪಂ ಸದಸ್ಯರಿಗೆ ಈ ಕುರಿತು ತರಬೇತಿ ಕಾರ್ಯಾಗಾರ ಮಾಡಬೇಕೆಂದು ಸೂಚಿಸಿದರು.

ಅನವಾಲ, ಕಾಡರಕೊಪ್ಪ ಏತ ನೀರಾವರಿ ಯೋಜನೆ ಟೆಂಡರ್ ಆಗಿದ್ದು, ಮಾರ್ಚ್‌ನಲ್ಲಿ ಚಾಲನೆ ನೀಡಲಾಗುವುದು. ಮೆಳ್ಳಿಗೇರಿ, ಹಲಗಲಿ, ಅರಕೇರಿ ಏತ ನೀರಾವರಿ ಯೋಜನೆ ಆರಂಭಿಸಲಾಗುವುದು ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಆಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಎಸ್‌ಪಿ ಅಮರನಾಥ ರೆಡ್ಡಿ, ತಹಸೀಲ್ದಾರ್ ವಿನೋದ ಹತ್ತಳ್ಳಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಸಾಗರ ತೆಕ್ಕೆನ್ನವರ, ತಾಲೂಕಾಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಾಮಚಂದ್ರಪ್ಪ ಬೋರ್ಜಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಭಯಕುಮಾರ ಮೊರಬ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ರವಿಕಿರಣ ಡಂಬಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕಾಖಂಡಕಿ ಇದ್ದರು.