ಹನೂರು: ಗುಂಡಿಯಲ್ಲಿ ಭರ್ತಿಯಾಗಿರುವ ತ್ಯಾಜ್ಯವನ್ನು ವಿಲೇ ಮಾಡಿ ಶೌಚಗೃಹವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಬುಧವಾರ ಸ್ಥಳೀಯರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಶೋಕ್ ಅವರಿಗೆ ಮನವಿ ಮಾಡಿದರು.
ಸ್ಥಳೀಯರು ಮಾತನಾಡಿ, ಖಾಸಗಿ ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ಸಾರ್ವಜನಿಕ ಶೌಚಗೃಹ ತ್ಯಾಜ್ಯದಿಂದ ಭರ್ತಿಯಾಗಿದೆ. ಇದರಿಂದ ಆಗಾಗ್ಗೆ ಶೌಚಗೃಹದ ಬಾಗಿಲನ್ನು ಮುಚ್ಚಲಾಗುತ್ತಿದೆ. ಹನೂರು ತಾಲೂಕು ಕೇಂದ್ರವಾಗಿದ್ದು, ನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ, ಶೌಚಗೃಹಕ್ಕೆ ಬೀಗ ಹಾಕಿರುವುದರಿಂದ ಸಾರ್ವಜನಿಕರು ಅದರಲ್ಲೂ ಮಹಿಳೆಯರು, ಹೆಣ್ಣು ಮಕ್ಕಳು ತೊಂದರೆ ಅನುಭವಿಸುತ್ತಿದ್ದು ಶೌಚಕ್ಕಾಗಿ ಪರದಾಡುವಂತಾಗಿದೆ ಎಂದು ಸಮಸ್ಯೆ ವಿವರಿಸಿದರು.
ಶೌಚಗೃಹ ಬಂದ್ ಆಗಿರುವುದರಿಂದ ಕೆಲವರು ಇದರ ಆಸುಪಾಸಿನಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ವಿಪರೀತ ದುರ್ನಾತ ಬೀರುತ್ತಿದೆ. ಅನೈರ್ಮಲ್ಯದಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ವ್ಯಾಪಾರ ವಹಿವಾಟು ನಡೆಸಲು ತೊಂದರೆಯಾಗಿದೆ. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬ್ಲೀಚಿಂಗ್ ಪೌಡರ್ ಸಹ ಸಿಂಪಡಿಸುತ್ತಿಲ್ಲ. ಆದ್ದರಿಂದ ಈ ಬಗ್ಗೆ ಕೂಡಲೇ ಅಗತ್ಯ ಕ್ರಮವಹಿಸಿ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ಗುಂಡಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇ ಮಾಡಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಮುಖ್ಯಾಧಿಕಾರಿ ಅಶೋಕ್ ಪ್ರತಿಕ್ರಿಯಿಸಿ, ಪಪಂನಲ್ಲಿನ ಸೆಕ್ಕಿಂಗ್ ಯಂತ್ರ ಹಾಳಾಗಿದೆ. ಕೂಡಲೇ ಬೇರೆಡೆಯಿಂದ ಯಂತ್ರವನ್ನು ತರಿಸಿ ವಿಲೇವಾರಿ ಮಾಡಲಾಗುವುದು. 7 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಶೌಚಗೃಹ ನಿರ್ಮಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಪ್ರಭಾರ ಆರೋಗ್ಯಾಧಿಕಾರಿ ಮಹೇಶ್ ಅವರಿಗೆ ಕೂಡಲೇ ಬ್ಲೀಚಿಂಗ್ ಪೌಡರ್ ಸಿಂಪಡಿಸುವಂತೆ ಸೂಚನೆ ನೀಡಿದರು.
ಪಪಂ ಸದಸ್ಯ ಸುದೇಶ್, ಮುಖಂಡರಾದ ನಾಗೇಂದ್ರ, ಮಹೇಶ್, ನಿರಂಜನ್, ಕಂಡಕ್ಟರ್ ಮಹೇಶ್, ಗೋವಿಂದ, ರಾಜು ಇತರರಿದ್ದರು.