ಜಿಲ್ಲೆ

ಪರಿಸರ ಉಳಿವಿನಿಂದ ಶುದ್ಧ ಆರೋಗ್ಯ ಲಭ್ಯ

ಕಿರಣ್ ಗೌಡ.ಜಿ

ಕಿಕ್ಕೇರಿ: ವಿಶ್ವವನ್ನೇ ಬಿಡದೆ ಕಾಡುತ್ತಿರುವ ರೋಗ, ಜಲಕ್ಷಾಮದಂತಹ ಸಮಸ್ಯೆಗಳಿಗೆ ಪರಿಸರ ಉಳಿವು ಮಾತ್ರ ಪರಿಹಾರ ಎಂದು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಮುಖ್ಯಶಿಕ್ಷಕಿ ಎಂ.ಕೆ.ಪುಷ್ಪಲತಾ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದ ಅವರು, ಶುದ್ಧ ಗಾಳಿಗೆ ಹಾಹಾಕಾರದ ಸೃಷ್ಟಿ, ನಮ್ಮಲ್ಲಿನ ಸ್ವಾರ್ಥಕ್ಕೆ ಕಾಂಕ್ರೀಟ್ ಕಾಡು ಎಲ್ಲೆಡೆ ನಿರ್ಮಾಣವಾಗಿದೆ. ಪರಿಣಾಮ ಆಹಾರ, ಪರಿಸರ ಎಲ್ಲವೂ ವಿಷಮಯವಾಗಿದೆ. ಮಳೆ ಕಾಡು, ನದಿಯ ಮೂಲವೇ ಬದಲಾಗುತ್ತಿವೆ. ಪರಿಸರ ನಾಶವಾದಲ್ಲಿ ಮನುಕುಲವೇ ಸರ್ವ ನಾಶವಾಗಲಿದೆ ಎಂದರು.

ಮರ-ಗಿಡಗಳು ಶುದ್ಧ ಗಾಳಿ ನೀಡುವ ಜೀವ ಸಂಜೀವಿನಿಯಾಗಿದೆ. ಪರಿಸರ ಸಮತೋಲನವಾಗಲು ಮರ-ಗಿಡಗಳು ಪ್ರಮುಖ ಪಾತ್ರ ವಹಿಸಲಿವೆ. ಕರೊನಾ ಮತ್ತಿತರ ರೋಗಗಳ ಉಲ್ಬಣದಿಂದ ಉಂಟಾಗುವ ಸಾವು-ನೋವಿಗೆ ಅಶುದ್ಧ ಗಾಳಿಯೇ ಕಾರಣ ಎಂಬುದನ್ನು ಮರೆಯಬಾರದು ಎಂದರು.

ಬಾಲ್ಯದಲ್ಲಿಯೇ ಮಕ್ಕಳು ಮರ-ಗಿಡ ಬೆಳೆಸಿ, ಉಳಿಸುವ ಸಂಸ್ಕಾರ ರೂಢಿಸಿಕೊಳ್ಳಿ. ಮನೆಯ ಮುಂದೆ ಒಂದೆರಡು ಗಿಡ ನೆಟ್ಟು ಅದಕ್ಕೆ ಮನೆಯವರ ಹೆಸರು ಇಡಿ. ದೊಡ್ಡದಾಗಿ ಬೆಳೆಸಿ ಖುಷಿ ನೀಡಲಿದೆ. ಪಾಲಕರು ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಸಹಕರಿಸಬೇಕು. ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿದೆ ಎನ್ನುವುದಕ್ಕೆ ಮರಗಿಡ ಬೆಳೆಸಿದರೆ ಸಾಕು ಎಂದು ಕಿವಿಮಾತು ಹೇಳಿದರು.

ಶಿಕ್ಷಕರು ಮಕ್ಕಳಿಗೆ ಪರಿಸರ ಸಂರಕ್ಷಣೆಗಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಪದ್ಮಮ್ಮ, ರಂಗಲಕ್ಷ್ಮೀ, ಪದ್ಮಾ ಹಾಜರಿದ್ದರು.