ಜಿಲ್ಲೆ

ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ

ಪ್ರಶಾಂತ ಹೂಗಾರ

ರಾಯಬಾಗ: ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಂಚಕರವಾಡಿ, ದಿಗ್ಗೆವಾಡಿ, ಭಿರಡಿ ಮತ್ತು ಜಲಾಲಪುರ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಕಂಚಕರವಾಡಿ ಗ್ರಾಮದಲ್ಲಿ ಬುಧವಾರ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮಂಜೂರಾದ 2.78 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಿರುವ ನೀರಿನ ಶುದ್ಧೀಕರಣ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಬಹಳ ವರ್ಷಗಳ ಹಿಂದೆ ನಿರ್ಮಿಸಿದ್ದ ನೀರಿನ ಶುದ್ಧೀಕರಣ ಘಟಕ ಮತ್ತು ಪೈಪ್‌ಲೈನ್‌ಗಳು ಹಾಳಾಗಿದ್ದರಿಂದ ಇಲ್ಲಿಂದ ಈ ನಾಲ್ಕು ಗ್ರಾಮಗಳಿಗೆ ಶುದ್ಧ ನೀರು ಸರಬರಾಜು ಮಾಡಲು ಸಾಧ್ಯಗಿರಲಿಲ್ಲ. ಒತ್ತಾಯದ ಮೇರೆಗೆ 1.50 ಲಕ್ಷಕ್ಕೂ ಹೆಚ್ಚು ಸಾಮರ್ಥ್ಯದ ಜಲಸಂಗ್ರಹ, ಶುದ್ಧ ನೀರಿನ ಘಟಕ, ಹೊಸ ಪಂಪ್‌ಸೆಟ್ ಸೇರಿ ರಿಪೇರಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಎಇಇ ಸುಭಾಷ ಭಜಂತ್ರಿ, ಜೆಇ ಲೋಹಿತ ಕಾಂಬಳೆ, ಸದಾಶಿವ ಘೋರ್ಪಡೆ, ಕಲ್ಲಪ್ಪ ಸನದಿ, ಅಣ್ಣಾಸಾಹೇಬ ಬೆಳ್ಳೆಸಿ, ಅಜಿತ ಕಳ್ಳಿ, ಬಸವಲಿಂಗ ನಾಯಿಕ ಇತರರಿದ್ದರು.