ಹುಬ್ಬಳ್ಳಿ: ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ ಹಾಗೂ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ನಗರದಲ್ಲಿ ಭಾನುವಾರ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ನಗರದ ಹೊಸೂರು ಕ್ರಾಸ್ ನಿಂದ ಗೋಕುಲ ರಸ್ತೆ ಮಾರ್ಗವಾಗಿ ವಿಮಾನ ನಿಲ್ದಾಣದವರೆಗೂ ನಡೆದ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು.
ಅಭಿಯಾನದಲ್ಲಿ ಸುಮಾರು 400ಕ್ಕೂ ಹೆಚ್ಚು ಸ್ವಯಂ ಸೇವಕರು ಹಾಗೂ ಬಿಜೆಪಿ ಕಾರ್ಯಕರ್ತರು, ಯೂತ್ ಫಾರ್ ಸೇವಾ ಕಾರ್ಯಕರ್ತರು, ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡು ಸ್ವಚ್ಛತೆ ನಡೆಸಿದರು.
ಹೊಸೂರ ಕ್ರಾಸ್ ನಿಂದ ವಿಮಾನ ನಿಲ್ದಾಣ ವರೆಗೆ ನಾಲ್ಕು ಭಾಗಗಳನ್ನು ಮಾಡಿ ತಂಡ ರಚಿಸಲಾಗಿತ್ತು. ಹೊಸೂರು ರಸ್ತೆಯಿಂದ ಸಾರಿಗೆ ಸಂಸ್ಥೆ ಡಿಪೋವರೆಗೆ, ಡಿಪೋದಿಂದ ಹೊಸ ಬಸ್ ನಿಲ್ದಾಣ, ಬಸ್ ನಿಲ್ದಾಣದಿಂದ ಬಸವೇಶ್ವರ ನಗರ ಹಾಗೂ ಬಸವೇಶ್ವರ ನಗರದಿಂದ ವಿಮಾನ ನಿಲ್ದಾಣದವರೆಗೆ ನಾಲ್ಕು ತಂಡಗಳು ಸ್ವಚ್ಚತೆ ನಡೆಸಿದವು. ಬೆಳಗ್ಗೆ 7ರಿಂದ 11 ಗಂಟೆಯವರೆಗೂ ಸ್ವಚ್ಛತಾ ಕಾರ್ಯ ನಡೆಯಿತು.
ಹುಬ್ಬಳ್ಳಿ ಧಾರವಾಡ ಅವಳಿನಗರ ಕ್ಲೀನ್ ಸಿಟಿ ಗ್ರೀನ್ ಸಿಟಿ ಮಾಡುವುದು ನಮ್ಮ ಮೂಲ ಉದ್ದೇಶ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡುತ್ತೇವೆ. ಇಂತಹ ಕಾರ್ಯಗಳಿಗೆ ಯುವಕರು ಮುಂದೆ ಬರಬೇಕು. ಕ್ಷೇತ್ರದಲ್ಲಿ ತಿಂಗಳಿಗೆ ಒಂದು ಬಾರಿ ಸ್ವಚ್ಛತಾ ಅಭಿಯಾನ ನಡೆಸಲಾಗುವುದು ಎಂದು ಶಾಸಕರು ತಿಳಿಸಿದರು.
ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜು ಕಾಳೆ, ಚೇತನ ಬಾರದ್ವಾಡ, ಕೃಷ್ಣ ಗಂಡಗಾಳೇಕರ್, ಹರೀಶ್ ಜಂಗಲಿ, ಪ್ರವಿಣ ಪವಾರ, ಶಿವನಗೌಡರ, ರಾಮನಗೌಡ ಶೆಟ್ಟನಗೌಡರ, ಲಕ್ಷ್ಮಣ ಕಲಾಲ್, ಚಂದ್ರು ಮುಶಪ್ಪನವರ, ಸುನೀಲ್ ಅರಮನಿ, ಗಿರೀಶ ಚಾವರಗಿ, ದೇವದಾಸ ಹಬೀಬ್, ಶಿವಾಜಿ ಪರಪ್ಪನವರ, ಜಯಶ್ರೀ ಗರಗದ, ಡಿ, ರಘು, ರಘು ಪವಾರ ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.