ಜಿಲ್ಲೆ

ಅರ್ಕಾವತಿ ನದಿ ದಂಡೆಯಲ್ಲಿದೆ ಸ್ವಚ್ಛ, ಸುಂದರ ಹರೀಸಂದ್ರ

ಬೆಟ್ಟ-ಗುಡ್ಡಗಳ ಪ್ರಕೃತಿ ವನಸಿರಿ ಮಧ್ಯೆ ಚೋಳರ ಕಾಲದ ಪುಟ್ಟಗ್ರಾಮ



ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ


ಸುತ್ತಲೂ ಹಸಿರು ತೋರಣ ಪೋಣಿಸಿದಂತೆ ಬೆಟ್ಟ-ಗುಡ್ಡಗಳ ಪ್ರಕೃತಿ, ವನಸಿರಿ ಮಧ್ಯೆ ಹರಿಯುವ ಅರ್ಕಾವತಿ ನದಿ ದಂಡೆಯಲ್ಲಿ ಪುಟ್ಟ ಗ್ರಾಮವಾಗಿ ಕಂಡರೂ ಚೋಳರ ಕಾಲದ ಐತಿಹಾಸಿಕ ದೇವಸ್ಥಾನ, ಧಾರ್ಮಿಕ, ಶೈಕ್ಷಣಿಕ, ಕೃಷಿ ಪ್ರಧಾನವಾಗಿ ಗುರುತಿಸಿಕೊಂಡು ಜಿಲ್ಲೆಯಲ್ಲೇ ದೊಡ್ಡದಾಗಿ ಹೆಸರುಗಳಿಸಿದೆ ಸ್ವಚ್ಛ, ಸುಂದರ ಗ್ರಾಮ ಹರೀಸಂದ್ರ. 


ರಾಮನಗರ ತಾಲೂಕು, ಕಸಬಾ ಹೋಬಳಿಯಲ್ಲಿರುವ ಹರೀಸಂದ್ರ ಪುಟ್ಟಹಳ್ಳಿಯಾದರೂ ಗ್ರಾಪಂ ಕೇಂದ್ರಸ್ಥಾನ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರ ಹೊಂದಿದ್ದು, ಜಿಲ್ಲೆಯ ಮೂಲೆಮೂಲೆಗಳಲ್ಲೂ ಹೆಸರನ್ನು ಪಸರಿಸಿದೆ. ಇದು ಜಿಲ್ಲಾ ಕೇಂದ್ರದಿಂದ 9 ಕಿಮೀ ಅಂತರದಲ್ಲಿದ್ದು, ಅಂದಾಜು 550 ಜನಸಂಖ್ಯೆ ಇದೆ.

500 ವರ್ಷಗಳ ಇತಿಹಾಸ 


ಹರೀಸಂದ್ರವು 200 ವರ್ಷಗಳಿಂದೀಚೆಗೆ ಉದಯವಾಗಿದೆ ಎನ್ನಲಾಗುತ್ತಿದೆಯಾದರೂ 500 ವರ್ಷಗಳ ಹಿಂದೆ ಕೆಲವರು ಈಗಿನ ಹರೀಸಂದ್ರದ ಹೊರವಲಯದಲ್ಲಿ ಸೋಮೇಶ್ವರ ದೇವಸ್ಥಾನ ಒಂದೇ ದಿನದಲ್ಲಿ ಕಟ್ಟಿಕೊಂಡು ಸೋಮಸಂದ್ರ ಎಂಬ ಗ್ರಾಮ ನಿರ್ಮಾಣ ಮಾಡಿ ನೆಲೆನಿಂತಿದ್ದರಂತೆ. ಕಾಲಾಂತರದಲ್ಲಿ ಸೋಮಸಂದ್ರದ ಜನ ಗ್ರಾಮ ತೊರೆದು ರಾಮನಗರ ತಾಲೂಕಿನ ಮಾದಾಪುರ, ಅರ್ಚಕರಹಳ್ಳಿಗೆ ವಲಸೆ ಹೋಗಿದ್ದು, ಉಳಿದ ಕೆಲವರು ಸೋಮೇಶ್ವರ ದೇವಸ್ಥಾನದ ಮೇಲ್ಭಾಗದ ಹರೀಸಂದ್ರ ಗ್ರಾಮ ಸ್ಥಾಪನೆ ಮಾಡಿ ಸೋಮೇಶ್ವರನನ್ನೇ ಗ್ರಾಮ ದೇವರನ್ನಾಗಿ ಮಾಡಿಕೊಂಡು ನೆಲೆನಿಂತರಂತೆ ಎಂದು ಗ್ರಾಮದ ಹಿರಿಯರು ಇತಿಹಾಸ ಮೆಲುಕು ಹಾಕುತ್ತಾರೆ.

ಸೋಮೇಶ್ವರನಿಗೆ ಮೆಣಸಿನ ಸಾರೇ ನೈವೇದ್ಯ


ಗ್ರಾಮದಲ್ಲಿ ಚೋಳರ ಕಾಲದ ಸೋಮೇಶ್ವರ, ಬಸವೇಶ್ವರ, ಕಗ್ಗಲ್ಲಪ್ಪ, ಮಹದೇಶ್ವರ, ಆಂಜನೇಯ ದೇವಸ್ಥಾನಗಳಿವೆ. ಪ್ರತಿ ಹಬ್ಬ-ಹರಿದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತವೆ. ಶಿವರಾತ್ರಿಯ ಒಂದು ವಾರ ನಂತರ ಸೋಮೇಶ್ವರ ದೇವಸ್ಥಾನ ಆವರಣದಲ್ಲಿ ಬೃಹತ್ ಅನ್ನದಾಸೋಹ ಏರ್ಪಡಿಸಲಾಗುತ್ತದೆ. ಆದರೆ ಸೋಮೇಶ್ವರನಿಗೆ ಮೆಣಸಿನ ಸಾರೇ ಮುಖ್ಯ ನೈವೇದ್ಯವಾಗಿದೆ. ಭಕ್ತರಿಗೂ ಅದೇ ಮೆಣಸಿನ ಸಾರು, ಅನ್ನ, ಪಾಯಸ ಬಡಿಸಲಾಗುತ್ತಿತ್ತು. ಆದರೀಗ ಎಲ್ಲ ತರದ ದಾಸೋಹ ಏರ್ಪಡಿಸಲಾಗುತ್ತಿದೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ ಗ್ರಾಮಪಕ್ಕದ ಗುಡ್ಡದಲ್ಲಿನ ಕಗ್ಗಲ್ಲಪ್ಪ ದೇವರಿಗೆ ಪಾಯಸ, ಅಕ್ಕಿ, ರಾಗಿ ಶಾವಿಗೆಯ ವಿಶೇಷ ಅಡುಗೆ ಮಾಡಿ ನೈವೇಧ್ಯ ಸಲ್ಲಿಸಿ ಪೂಜಿಸಿದರೆ ಮಳೆ ಬರುತ್ತದೆ ಎಂಬ ವಾಡಿಕೆ ಜನರಲ್ಲಿದೆ.

ನೀರಿನ ಬವಣೆ ನೀಗಿಸಿದೆ ಅರ್ಕಾವತಿ


ಗ್ರಾಮದಲ್ಲಿ ಕೃಷಿ ಕುಟುಂಬಗಳೇ ಹೆಚ್ಚಿದ್ದು, ಅರ್ಕಾವತಿ ನದಿಯು ರೈತರ ನೀರಿನ ಬವಣೆ ನೀಗಿಸಿದೆ. ನದಿಯಲ್ಲಿ ನೀರು ಸದಾ ಹರಿಯುವ ಕಾರಣ ಬೋರ್‌ವೆಲ್‌ಗಳಲ್ಲಿ ಅಂತರ್ಜಲಮಟ್ಟ ಉತ್ತಮವಾಗಿಯೇ ಇದ್ದು, ನೀರಿನ ಲಭ್ಯತೆ ಕೃಷಿಗೆ ಪುಷ್ಟಿ ನೀಡಿದೆ. ರೇಷ್ಮೆ, ಮಾವು, ತೆಂಗು ಸೇರಿ ತೋಟದ ಬೆಳೆಗಳಲ್ಲಿ ಲಾಭ ಕಂಡಕೊಳ್ಳುತ್ತಿರುವ ಇಲ್ಲಿನ ರೈತರ ಉಪ ಕಸುಬಾಗಿ ಹೈನುಗಾರಿಕೆ ಕೈ ಹಿಡಿದಿದೆ.

ಅಭಿವೃದ್ಧಿಯತ್ತ ಸಾಗುತ್ತಿದೆ ಗ್ರಾಮ


ಮೊದಮೊದಲು ತೆಂಗಿನ ಗರಿ ಶೆಡ್, ನಾಡು ಹೆಂಚು, ಮಣ್ಣಿನ ಗೋಡೆಯ ಮನೆ, ಮಣ್ಣಿನ ರಸ್ತೆಗಳಿದ್ದ ಹರೀಸಂದ್ರ ಸದ್ಯ ಅಭಿವೃದ್ಧಿ ಕಾಣುತ್ತಿದ್ದು, ಕಾಂಕ್ರೀಟ್ ಮನೆಗಳು, ಡಾಂಬರು ರಸ್ತೆಗಳನ್ನು ಹೊಂದಿದೆ. ಸರ್ಕಾರಿ ಮಾಧ್ಯಮಿಕ ಶಾಲೆ, ಪ್ರೌಢಶಾಲೆ, ಅಂಗನವಾಡಿ, ಗ್ರಾಪಂ ಕೇಂದ್ರ, ಗ್ರಂಥಾಲಯ, ಹಾಲಿನ ಡೇರಿ, ಚರಂಡಿ ವ್ಯವಸ್ಥೆ, ರಸ್ತೆ, ಕುಡಿಯುವ ನೀರು ಸೇರಿ ಅಗತ್ಯ ಸೌಕರ್ಯ ಉತ್ತಮವಾಗಿದ್ದು, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಮಾಧ್ಯಮಿಕ ಶಿಕ್ಷಣವನ್ನು ಇದೇ ಗ್ರಾಮದಲ್ಲಿ ಪಡೆದಿದ್ದರು ಎನ್ನಲಾಗುತ್ತಿದೆ.

ಸೇತುವೆ ದುರಸ್ತಿ ಮಾಡಬೇಕಿದೆ


ಅರ್ಕಾವತಿ ನದಿ ದಂಡೆಯಲ್ಲಿಯೇ ಗ್ರಾಮ ಇರುವ ಕಾರಣ ನದಿಯ ಮತ್ತೊಂದು ದಂಡೆಯಲ್ಲಿ ರೈತರ ಜಮೀನುಗಳಿದ್ದು, ಮೊದಲು ನದಿ ದಾಟಿಯೇ ಕೃಷಿ ಕೆಲಸ ನಿರ್ವಹಿಸಬೇಕಿತ್ತು. ಕೆಲ ವರ್ಷಗಳ ಹಿಂದೆ ಗ್ರಾಮಕ್ಕೆ ಸೇತುವೆ ಸಂಪರ್ಕ ಒದಗಿಸಲಾಗಿದೆ. ನದಿ ದಾಟಿ ಕೃಷಿ ಕೆಲಸಕ್ಕೆ ಮತ್ತು ಬೆಂಗಳೂರು ರಸ್ತೆಗೆ ಸಂಪರ್ಕ ಸಾಧಿಸಬಹುದಾದರೂ ಕಳೆದ ವರ್ಷ ಸುರಿದ ಭಾರಿ ಮಳೆಗೆ ಸೇತುವೆ ಬಿರುಕು ಬಿಟ್ಟಿದ್ದು, ಇದುವರೆಗೂ ದುರಸ್ತಿಯಾಗಿಲ್ಲ. ಒಂದೆರೆಡು ವಾರಗಳಲ್ಲಿ ಮಳೆಗಾಲ ಆರಂಭಗೊಳ್ಳಲಿದ್ದು, ಅಧಿಕಾರಿಗಳು ಸೇತುವೆ ದುರಸ್ತಿಗೆ ಕೂಡಲೇ ಕ್ರಮವಹಿಸಬೇಕಿದೆ.
ಹರೀಸಂದ್ರವು ಕೃಷಿ ಪ್ರಧಾನ ಗ್ರಾಮವಾಗಿದ್ದು, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲೂ ಸದಾ ಮುಂದಿದೆ. ಅರ್ಕಾವತಿ ನದಿ ದಡದಲ್ಲಿ ಸುಂದರ ಪ್ರಕೃತಿಯ ಸೊಬಗು ಗ್ರಾಮವನ್ನು ಮತ್ತಷ್ಟು ಸಮೃದ್ಧಗೊಳಿಸಿದೆ.
ಯೋಗಾನಂದ್, ಹರೀಸಂದ್ರ