ಜಿಲ್ಲೆ

ಕಮ್ಯೂನಿಟಿ ಮೊಬಿಲೈಸರ್ ಸಕ್ರಿಯ : ಮೂಡುಬಿದಿರೆಯಲ್ಲಿ ಐವರು ಮಹಿಳೆಯರಿಂದ ಸ್ವಚ್ಛ ಜಾಗೃತಿ : ಪುರಸಭೆಯಿಂದ ತಳಮಟ್ಟದಿಂದಲೇ ಕಾರ್ಯಾಚರಣೆ

ಸೌಮ್ಯ ಆರ್

ಯಶೋಧರ ವಿ.ಬಂಗೇರ ಮೂಡುಬಿದಿರೆ

ಸ್ವಚ್ಛ ಭಾರತ್ ಮಿಷನ್(ನಗರ) 2.0 ಯೋಜನೆಯ ಅಡಿಯಲ್ಲಿ ಮೂಡಿಬರುತ್ತಿರುವ ‘ಸ್ವಚ್ಛ ಮೂಡುಬಿದಿರೆ’ ಪರಿಕಲ್ಪನೆಗೆ, ಕೇಂದ್ರ ಸರ್ಕಾರದ ‘ಕಮ್ಯೂನಿಟಿ ಮೊಬಿಲೈಸರ್’ ಚಟುವಟಿಕೆಯಿಂದಾಗಿ ಬಲ ಬಂದಿದೆ.

ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ಜುಲೈ ತಿಂಗಳಿನಿಂದ ಐವರು ‘ಕಮ್ಯೂನಿಟಿ ಮೊಬಿಲೈಸರ್’ಗಳು ಸ್ವಚ್ಛ ಜಾಗೃತಿಗಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಹುದ್ದೆಗೆ ಜುಲೈ 1ರಂದು ಇಬ್ಬರು, ಜುಲೈ 7ರಂದು ಒಬ್ಬರು ಹಾಗೂ ಜುಲೈ 15ರಂದು ಇಬ್ಬರನ್ನು ಸರ್ಕಾರ ನೇಮಿಸಿದೆ. ಮೂಡುಬಿದಿರೆಯಲ್ಲಿ ಸ್ಥಳೀಯರೇ ಆದ ಆಶಾ, ರಾಜೇಶ್ವರಿ, ಅಮಿತಾ, ಚಂದ್ರಿಕಾ, ಅನುಷಾ ಅವರು ಕಮ್ಯೂನಿಟಿ ಮೊಬಿಲೈಸರ್ ಆಗಿ ನಗರ ಶುಚಿತ್ವ, ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.

ಕಾರ್ಯವೈಖರಿ ಹೇಗೆ?: ಸ್ವಚ್ಛ ಭಾರತ್ ಮಿಷನ್‌ನ ಯೋಜನೆಗಳನ್ನು ಸಾಮಾಜಿಕವಾಗಿ ಪ್ರಚುರಪಡಿಸುವ, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಹುದ್ದೆಯನ್ನು ಸರ್ಕಾರ ಜಾರಿಗೆ ತಂದಿದ್ದು. ಅದರ ನಿಯಮಾನುಸಾರ ಈ ಕಮ್ಯೂನಿಟಿ ಮೊಬಿಲೈಸರ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂಡುಬಿದಿರೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಇವರು, ರೋಟರಿ ಕ್ಲಬ್ ಟೆಂಪಲ್ ಟೌನ್ ಸಹಯೋಗದೊಂದಿಗೆ ಅಂಗನವಾಡಿ ಕೇಂದ್ರಗಳಿಗೆ ತೆರಳಿ ಲಾರ್ವಾ ಉತ್ಪತ್ತಿ ತಾಣಗಳ ಪತ್ತೆ ಮಾಡಿ ನಾಶಪಡಿಸಿ, ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಪೇಟೆಯ ವಿವಿಧ ಅಂಗಡಿಗಳಿಗೆ ತೆರಳಿ ಅಲ್ಲಿ ಅನುಸರಿಸಬೇಕಾದ ಸ್ವಚ್ಛತೆ, ಏಕಬಳಕೆ ವಸ್ತುಗಳ ನಿಷೇಧದ ಬಗ್ಗೆ ಸರ್ವೇ, ಜಾಗೃತಿ, ಹಸಿಕಸ-ಒಣಕಸಗಳ ಬಗ್ಗೆ ಮಾಹಿತಿ ಹಾಗೂ ಅನುಷ್ಠಾನ, ಉದ್ಯಮ ಪರವಾನಗಿಯ ನವೀಕರಣ ವಿವರ ಹೀಗೆ ವಿವಿಧ ರೀತಿಯಲ್ಲಿ ಅಂಗಡಿಯವರು ಹಾಗೂ ಅಲ್ಲಿ ಬರುವ ಗ್ರಾಹಕರಿಗೆ ಅರಿವು ಮೂಡಿಸುತ್ತಿದ್ದಾರೆ. ಮೂಡುಬಿದಿರೆ ವಾರದ ಸಂತೆಯ ದಿನವಾದ ಶುಕ್ರವಾರ ನಿರಂತರವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸ್ವಯಂಸೇವೆಯ ಮುಖಾಂತರ ಗ್ರಾಹಕರಿಗೆ ಕಡಿಮೆ ದರದಲ್ಲಿ ಬಟ್ಟೆಚೀಲ ಒದಗಿಸುವ ಅಭಿಯಾನ ನಡೆಯುತ್ತಿದ್ದು, ಕಮ್ಯೂನಿಟಿ ಮೊಬಿಲೈಸರ್‌ಗಳು ಅದರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರು, ಮುಖ್ಯಾಧಿಕಾರಿ ಇಂದು ಎಂ., ಪರಿಸರ ಅಭಿಯಂತೆ ಶಿಲ್ಪಾ ಎಸ್. ಮಾರ್ಗದರ್ಶನ ಮಾಡುತ್ತಿದ್ದಾರೆ.

ಉತ್ಸವಗಳಲ್ಲೂ ಸಕ್ರಿಯ

ಈ ಬಾರಿಯ ಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ ಸಂದರ್ಭದಲ್ಲೂ ಫೀಲ್ಡ್‌ಗೆ ಇಳಿದು ಕೆಲಸ ಮಾಡಿರುವ ಇವರು ಅಲ್ಲಲ್ಲಿ ಕಸಕಡ್ಡಿ ಹಾಕುವುದನ್ನು ತಪ್ಪಿಸುವ ಕುರಿತು ಜಾಗೃತಿ ಮೂಡಿಸಿದ್ದಾರೆ. ಪೇಟೆಯ ಕಂಬಗಳಲ್ಲಿ ಹಸಿಕಸ, ಒಣಕಸ ಚೀಲಗಳನ್ನು ಇರಿಸಿ ಕಸವನ್ನು ಅದರೊಳಗೆ ಹಾಕುವಂತೆ ಜನರನ್ನು ಮತ್ತು ಬೀದಿಬದಿ ವ್ಯಾಪಾರಸ್ಥರನ್ನು ಪ್ರೇರೇಪಿಸಿದ್ದಾರೆ. ಪುರಸಭೆಯ ಶೂನ್ಯ ತ್ಯಾಜ್ಯದ ಪರಿಕಲ್ಪನೆಗೂ ಅವರು ಸಾಥ್ ನೀಡುತ್ತಿದ್ದಾರೆ. ಪರಿಸರ ಜಾಗೃತಿ, ಸ್ವಚ್ಛತೆಯ ಕುರಿತು ಪೋಸ್ಟರ್, ಕಿರು ವಿಡಿಯೋ ತಯಾರಿಸಿ ಪುರಸಭೆಯ ಸಾಮಾಜಿಕ ಜಾಲತಾಣಕ್ಕೆ ಹಾಕುವ, ಅಗತ್ಯವಿದ್ದಲ್ಲಿ ಬೇರೆ-ಬೇರೆ ಸ್ಥಳಗಳಲ್ಲಿ ಪೋಸ್ಟರ್ ಅಳವಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಸ್ವಚ್ಛತೆಗೆ ಸಂಬಂಧಪಟ್ಟಂತೆ ಅಳವಡಿಸಲಾದ ಸಿಸಿ ಕ್ಯಾಮರಾಗಳ ಫೂಟೇಜ್ ಚೆಕ್ ಮಾಡಿ ವರದಿಯನ್ನು ಪುರಸಭೆಗೆ ನೀಡುತ್ತಿದ್ದಾರೆ.

ವಿಜಯವಾಣಿ ವರದಿಗೆ ಸ್ಪಂದನೆ

ಮೂಡುಬಿದಿರೆ ಬಸ್‌ನಿಲ್ದಾಣಕ್ಕೆ ತಾಗಿಕೊಂಡಿರುವ ಇಂದಿರಾ ಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿ ಜನಸಾಮಾನ್ಯರಿಂದ ಉಂಟಾಗಿದ್ದ ಅವ್ಯವಸ್ಥೆ, ಅನೈರ್ಮಲ್ಯದ ಕುರಿತು ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಸಾಮಾನ್ಯ ಸಭೆಯಲ್ಲೂ ಈ ವಿಚಾರ ಚರ್ಚೆಯಾಗಿತ್ತು. ತಕ್ಷಣ ಸ್ಪಂದಿಸಿದ ಪುರಸಭೆ ಸ್ವಚ್ಛತೆಯ ವ್ಯವಸ್ಥೆ ಕಲ್ಪಿಸಿದೆ. ಮುಂದೆ ಇಲ್ಲಿ ಶುಚಿತ್ವ ಕಾಪಾಡಿಕೊಳ್ಳುವಂತೆ ಮಾಡಲು ಕಮ್ಯೂನಿಟಿ ಮೊಬಿಲೈಸರ್‌ಗಳಿಗೆ ಜವಾಬ್ದಾರಿ ನೀಡಿದೆ. ತಕ್ಷಣ ಕಾರ್ಯಪ್ರವೃತ್ತರಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೋಸ್ಟರ್‌ಗಳನ್ನು ಸುತ್ತಮುತ್ತ ಅಳವಡಿಸಿದ್ದಾರೆ. ಶೌಚಗೃಹ ನಿರ್ವಾಹಕರಲ್ಲಿ ಮತ್ತು ವರ್ತಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ತಂಡದ ಸದಸ್ಯರೊಬ್ಬರು ಪ್ರತಿದಿನ ಇಂದಿರಾಗಾಂಧಿ ಕಾಂಪ್ಲೆಕ್ಸ್ ಸುತ್ತಮುತ್ತ ನಿಗಾವಿರಿಸಿದ್ದಾರೆ.

ಮೂಡುಬಿದಿರೆಯ ನಿವಾಸಿಗಳೇ ಪುರಸಭೆಯಲ್ಲಿ ಕಮ್ಯೂನಿಟಿ ಮೊಬಿಲೈಸರ್‌ಗಳಾಗಿ ಕರ್ತವ್ಯ ಮಾಡುತ್ತಿರುವುದರಿಂದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿದೆ. ಮುಂದೆ ವಾರ್ಡ್‌ವಾರು ವಿಂಗಡಣೆ ಮಾಡಿ ಅವರಿಗೆ ಜವಾಬ್ದಾರಿಯನ್ನು ಹಂಚಲಿದ್ದೇವೆ. ರಾಜ್ಯ ಅಥವಾ ಜಿಲ್ಲಾಮಟ್ಟದಲ್ಲಿ ಅವರಿಗೆ ಉತ್ತಮ ತರಬೇತಿ ಸಿಕ್ಕಿದರೆ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು. ಆರೋಗ್ಯ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಹೆಚ್ಚಿರುವುದರಿಂದ, ಕಮ್ಯೂನಿಟಿ ಮೊಬಿಲೈಸರ್‌ಗಳ ಸಹಕಾರದಿಂದ ಆ ಕೆಲಸಗಳು ಕೂಡ ಸಾಗುತ್ತಿವೆ. ಇಂದು ಎಂ. ಮುಖ್ಯಾಧಿಕಾರಿ, ಮೂಡುಬಿದಿರೆ ಪುರಸಭೆ ಪುರಸಭೆಯಿಂದ ಆಡಳಿತ, ಅಧಿಕಾರಿಗಳಿಂದ ನಮ್ಮ ಕೆಲಸಕ್ಕೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ನಾವು ಬೇರೆ-ಬೇರೆ ವೃತ್ತಿ, ಬದುಕಿನಿಂದ ಬಂದು ಈ ಹುದ್ದೆಯ ಮೂಲಕ ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಹುದ್ದೆಯ ಆಶಯಕ್ಕೆ ಸಂಬಂಧಪಟ್ಟ ಹಲವಾರು ಯೋಜನೆಗಳನ್ನು ನಾವು ಮಾಡುವವರಿದ್ದೇವೆ. ಅಮಿತಾ ಕಮ್ಯೂನಿಟಿ ಮೊಬಿಲೈಸರ್ https://www.vijayavani.net/sri-guru-jayanti https://www.vijayavani.net/priyadarshini-society-moodbidri-branch-inaugurated