ಜಿಲ್ಲೆ

ಸ್ವಚ್ಛ ಕೊಡಗು ಅಭಿಯಾನ ನಿತ್ಯವೂ ಆಗಲಿ

ಮಡಿಕೇರಿ

ಕಳೆದ ಬುಧವಾರ (ಅ.15) ಕೊಡಗಿನಾದ್ಯಂತ ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನ ನಡೆಯಿತು. ಜಿಲ್ಲೆಯಾದ್ಯಂತ ವಿವಿಧ ಸಂಘಟನೆಗಳು ಈ ಅಭಿಯಾನಕ್ಕೆ ಕೈ ಜೋಡಿಸಿದ್ದವು. ಉತ್ತಮ ಸ್ಪಂದನೆಯೂ ಸಿಕ್ಕಿತು. ಈ ಸಂದರ್ಭ ಕೇವಲ ಒಂದು ದಿನದಲ್ಲಿ ಒಟ್ಟಾರೆಯಾಗಿ ಸಂಗ್ರಹವಾದ ಕಸ ಸುಮಾರು 200 ಟನ್.

ಸ್ವಚ್ಛತೆ ಮತ್ತು ಶಿಸ್ತು ಕೊಡಗಿನವರಿಗೆ ರಕ್ತಗತವಾಗಿ ಬಂದಿದೆ. ಸ್ಥಳೀಯರು ಎಲ್ಲೆಂದರಲ್ಲಿ ಕಸ ಎಸೆಯದೆ ನಿಗದಿತ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ರೂಢಿಸಿಕೊಂಡು ಬಂದಿದ್ದಾರೆ. ಆದರೂ ಈ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹ ಆಗಿರುವುದು ಆತಂಕ ಹುಟ್ಟಿಸಿದೆ. ಇದಕ್ಕೆ ಕಾರಣ ಯಾರು ಎನ್ನುವುದರ ಬಗ್ಗೆ ಚರ್ಚೆಯೂ ಶುರುವಾಗಿದೆ. ಸ್ವಚ್ಛ ಕೊಡಗನ್ನು ಕಾಪಾಡಿಕೊಳ್ಳುವುದಕ್ಕೆ ಸಂಬAಧಿಸಿದAತೆ ಅಭಿಯಾನ 1 ದಿನಕ್ಕೆ ಮೀಸಲಾದರೆ ಸಾಕೆ ? ಎನ್ನುವ ಪ್ರಶ್ನೆಯನ್ನೂ ಮೂಡಿಸಿದೆ.

ಕೊಡಗಿನ ಸೌಂದರ್ಯ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದರಲ್ಲಿ ಜಿಲ್ಲೆಯ ರೆಸಾರ್ಟ್, ಹೋಮ್‌ಸ್ಟೇ ಸೇರಿದಂತೆ ಪ್ರವಾಸೋದ್ಯಮಗಳ ಜವಾಬ್ದಾರಿ ದೊಡ್ಡದಿದೆ. ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಮೂಲಕ ಇವರು ಈ ವಿಷಯದಲ್ಲಿ ತಮ್ಮ ಬದ್ಧತೆಯ ಪ್ರದರ್ಶನ ಮಾಡಿದ್ದಾರೆ. ಇದು ಕೇವಲ ತೋರಿಕೆ ಆಗದೆ ನೈಜ ಕಾಳಜಿ ಆಗಿರಲಿ ಎನ್ನುವುದು ಪರಿಸರಾಸಕ್ತರ ಅಭಿಪ್ರಾಯ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಕಳೆದ ವಾರ ಜಿಲ್ಲೆಯಾದ್ಯಂತ ನಡೆದ ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನ

ಒಂದು ದಿನಕ್ಕೆ ಮೀಸಲಾಗದೆ ವರ್ಷವಿಡೀ ಜಾಗೃತಿ ವಹಿಸಬೇಕು. ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮನೆಯಿಂದಲೇ ಶೂನ್ಯ ತ್ಯಾಜ್ಯದ ಬಗ್ಗೆ ಚಿಂತಿಸಬೇಕು. ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಎಸೆದು ಪ್ರಕೃತಿಗೆ ಧಕ್ಕೆ ಉಂಟು ಮಾಡುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಕಂಡುಬAದಲ್ಲಿ ಸ್ಥಳೀಯ ಆಡಳಿತ ಕೂಡಲೇ ಕ್ರಮವಹಿಸಬೇಕು

ಶ್ರೇಯಸ್ ಕುಮಾರ್, ಅಧ್ಯಕ್ಷ, ಡೊಮಿನೊಸ್ ಸಂಘ, ಸಿದ್ದಾಪುರ

ಸ್ವಚ್ಛತೆ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ರಸ್ತೆ ಬದಿಯಲ್ಲಿ ಮಾಂಸದ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಎಸೆದು ಹೋಗುತ್ತಿದ್ದಾರೆ. ಇದರ ಬಗ್ಗೆ ಜಾಗೃತಿ ಮೂಡಿಸಿದರೂ ಪ್ರಯೋಜನ ಆಗುತ್ತಿಲ್ಲ. ಕಾನೂನು ಕ್ರಮದ ಮೂಲಕ ಸಮಸ್ಯೆ ಬಗೆಹರಿಸಬೇಕಿದೆ. ಸಂಘ ಸಂಸ್ಥೆಗಳು, ವಿದ್ಯಾರ್ಥಿ ಸಮುದಾಯದ ಮೂಲಕ ಸ್ವಚ ಕಾರ್ಯಕ್ಕೆ ಮುಂದಾಗಿರುವುದು ಸ್ವಾಗತಾರ್ಹ.

ಕಾರ್ತಿಕ್ ಮಾದಪ್ಪ, ವಿದ್ಯಾರ್ಥಿ, ಕಿರಗಂದೂರು ಗ್ರಾಮ

ಸ್ವಚ್ಛತೆ ಮತ್ತು ಶಿಸ್ತು ಕೊಡಗಿನ ಹುಟ್ಟು ಗುಣ. ಇದನ್ನು ಇನ್ನೊಬ್ಬರಿಂದ ಹೇಳಿಸಿಕೊಳ್ಳದೆ ದಿನ ನಿತ್ಯದ ಜೀವನದ ಭಾಗವಾಗಿ ಪ್ರತಿಯೊಬ್ಬ ಜಿಲ್ಲೆಯ ವ್ಯಕ್ತಿ ಅಳವಡಿಸಿಕೊಳ್ಳಬೇಕು. ಕೊಡಗಿಗೆ ಆಗಮಿಸುವ ಪ್ರವಾಸಿಗರು ಜಿಲ್ಲೆಯ ಸ್ವಚ್ಛತೆ ಮತ್ತು ಶಿಸ್ತಿನ ಸಂಸ್ಕೃತಿಯನ್ನು ಗೌರವಿಸಬೇಕು, ಮತ್ತು ಪಾಲಿಸಬೇಕು. ಆಗ ಪಶ್ಚಿಮ ಘಟ್ಟದ ಸುಂದರ ಕೊಡಗು ಶಾಶ್ವತವಾಗಿ ಸುಂದರವಾಗಿ ಕಂಗೊಳಿಸುತ್ತದೆ.

ನೆಯ್ಯಣಿ ಸುಖಿರಾಜ್, ಬಕ್ಕ, ಬೆಟ್ಟಿಗೇರಿ ಗ್ರಾಮ

ಪ್ರತಿಯೊಬ್ಬರೂ ತನ್ನ ಮನೆ, ನೆಲ, ಜಲ, ಆಸ್ತಿಯ ಒಡೆಯರಾಗಿರುವಾಗ ಇಲ್ಲಿ ತನ್ನದಲ್ಲದ ಜಾಗ ಯಾವುದೂ ಇಲ್ಲ. ಒಂದಲ್ಲ ಒಂದು ರೀತಿಯಲ್ಲಿ ಜಗದ ಮಾಲೀಕರು ನಾವೇ. ಹೀಗಿರುವಾಗ ನಮ್ಮ ಸುತ್ತಮುತ್ತಲ ಪರಿಸರ, ಓಡಾಡುವ ದಾರಿಯಲ್ಲಿ ಕಣ್ಣಿಗೆ ಕಾಣುವ ಕಸಗಳನ್ನು ತೆಗೆದು ಹಾಕಿದಲ್ಲಿ ಹೀಗೆ ಸ್ವಚ್ಛತಾ ಅಭಿಯಾನ ಮಾಡಬೇಕಿಲ್ಲ. ಸರ್ಕಾರ ಪಂಚಾಯತ್ ವತಿಯಿಂದ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಕಸದ ಬುಟ್ಟಿಗಳನ್ನು ಇರಿಸಿ ಅದನ್ನು ಸೂಕ್ತ ಸಮಯದಲ್ಲಿ ವಿಲೇವಾರಿ ಮಾಡಿಸಿದಲ್ಲಿ ಇಷ್ಟೊಂದು ಕಸ ತುಂಬಲು ಸಾಧ್ಯವಿಲ್ಲ. ನಾಗರಿಕ ಪ್ರಜ್ಞೆಯುಳ್ಳ ಪ್ರವಾಸಿಗರೂ ಕಸ ಎಸೆಯುವಾಗ ಜಾಗೃತೆ ವಹಿಸುವುದು ಅಗತ್ಯ.

ಕಡ್ಲೇರ ತುಳಸಿ ಮೋಹನ್, ಬೆಟ್ಟಗೇರಿ ಬಕ್ಕ

ಉತ್ಸಾಹ ತಾತ್ಕಾಲಿಕ. ಶಿಸ್ತು ಶಾಶ್ವತ. ಸ್ವಚ್ಛ ಕೊಡಗು-ಸುಂದರ ಕೊಡಗು ತರಹದ ಒಂದು ದಿನದ ಅಭಿಯಾನಗಳು ತಾತ್ಕಾಲಿಕ ಉತ್ಸಾಹವನ್ನು ಮೂಡಿಸಿದರೂ ದೀರ್ಘಕಾಲಿಕ ಬದಲಾವಣೆಗೆ ನಿರಂತರ ಪ್ರಯತ್ನ ಅಗತ್ಯ. ಜನರಲ್ಲಿ ನಿತ್ಯಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಶಾಲೆ-ಕಾಲೇಜುಗಳಲ್ಲಿ ಶಿಕ್ಷಣ, ಸ್ಥಳೀಯ ಸಮುದಾಯಗಳ ಸಕ್ರಿಯ ಭಾಗವಹಿಸುವಿಕೆ ಮಾಧ್ಯಮಗಳ ಮೂಲಕ ಸಂದೇಶ ಹರಡುವಿಕೆ ಮತ್ತು ಸ್ವಚ್ಛತೆಗೆ ಸಂಬAಧಿಸಿದ ಸ್ಪರ್ಧೆಗಳು, ಪ್ರೋತ್ಸಾಹ ಕಾರ್ಯಕ್ರಮಗಳು ಸಹಾಯಕವಾಗುತ್ತವೆ. ಸರಿಯಾದ ಕಸ ವಿಲೇವಾರಿ ವ್ಯವಸ್ಥೆ ಮತ್ತು ದಂಡ-ಪ್ರೋತ್ಸಾಹ ನೀತಿಗಳನ್ನು ಜಾರಿಗೊಳಿಸಿದರೆ ಜನರು ಜವಾಬ್ದಾರಿಯಿಂದ ನಡೆದುಕೊಳ್ಳಲು ಪ್ರೇರೇಪಿತರಾಗಬಹುದು.

ಸಿ.ಎಸ್. ಸತೀಶ್, ಮುಖ್ಯ ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುಳ್ಳೂರು

ಸ್ವಚ್ಛ ಕೊಡಗು - ಸುಂದರ ಕೊಡಗು ಅಭಿಯಾನ ಒಂದು ಸಂಚಲನ ಮೂಡಿಸಿದ್ದು, ಈಗ ಪ್ರತಿಯೊಂದು ಊರಿನಲ್ಲೂ ಜನ ಸಾಮಾನ್ಯರಲ್ಲಿ ಕಸ ವಿಲೇವಾರಿ ಕುರಿತು ಜಾಗೃತಿ ಮೂಡಿಸಿದೆ.

ಪ್ರತಿ ಮಕ್ಕಳಿಗೂ ಹಾಗೂ ಜನ ಸಾಮಾನ್ಯರಿಗೂ ಸ್ವಚ್ಛತೆಯ ಬಗ್ಗೆ ಸರಿಯಾದ ಶಿಕ್ಷಣದ ಅವಶ್ಯಕತೆ ಇದೆ. ಸ್ವಚ್ಛತೆ ಪಾಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವು ಎದುರಿಸಬೇಕಾದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಾವಶ್ಯಕ.

ಭಜನ್ ಬೋಪಣ್ಣ, ಉದ್ಯಮಿ ಎವರ್‌ಗ್ರಿನ್ ಕೌಂಟಿ ರಿಟ್ರೀಟ್, ವಿರಾಜಪೇಟೆ

ಮಾನುಷ್ಯ ತನ್ನ ಸ್ವಾರ್ಥಕ್ಕಾಗಿ ಕಸ ಎಸೆದು, ಭೂಮಿಯನ್ನು ಮಲೀನಗೊಳಿಸುತ್ತಿದ್ದಾನೆ ಎಂಬುದು ಅತಿ ದುಃಖದ ವಿಷಯ. ಇದನ್ನು ತಡೆಯುವುದು ನಮ್ಮ ಹೊಣೆಗಾರಿಕೆ. ನಮ್ಮ ಮತ್ತು ಮುಂದಿನ ತಲೆಮಾರಿಗೆ ಜಾಗೃತಿ ಮೂಡಿಸಿ, ಅವರು ಭೂಮಿಯನ್ನು ಗೌರವಿಸುವ ಮತ್ತು ರಕ್ಷಿಸುವ ದಾರಿಯನ್ನು ಆಯ್ದುಕೊಳ್ಳಬೇಕು. ನಾವು ಪ್ಲಾಸ್ಟಿಕ್, ರಾಸಾಯನಿಕಗಳು ಮತ್ತು ಹಾನಿಕರ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಬೇಕು, ಸ್ಥಿರ, ಪರಿಸರ ಸ್ನೇಹಿ ನಡೆಗಳನ್ನು ಪಾಲಿಸಬೇಕು. ಎಲ್ಲರೂ ಕೈ ಜೋಡಿಸಿದರೆ, ನಮ್ಮ ಭೂಮಿ ತಾಯಿ ಶುದ್ಧ, ಆರೋಗ್ಯಕರ ಮತ್ತು ಸುಂದರವಾಗಿಯೇ ಮುಂದಿನ ತಲೆಮಾರಿಗೆ ಉಳಿಯಬಹುದು .

ಮೂವಿತ ಮಿನೇಜಸ್, ನೆಚರ್‌ಪ್ರನರ್ಸ್ ಕ್ಲಬ್, ವಿರಾಜಪೇಟೆ

ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಕಳೆದ ಬುಧವಾರ ಕೈಗೊಳ್ಳಲಾದ ಸ್ವಚ್ಚ ಕೊಡಗು - ಸುಂದರ ಕೊಡಗು ಸ್ವಚ್ಚತಾ ಅಭಿಯಾನ ಸಂದರ್ಭ ಜಿಲ್ಲೆಯಾದ್ಯಂತ 200 ಟನ್ ತ್ಯಾಜ್ಯ ಸಂಗ್ರಹವಾಗಿದೆ. ಇದು ಕೇವಲ 1 ದಿನಕ್ಕೆ ಸೀಮಿತವಾದ ಅಭಿಯಾನ ಆಗಬಾರದು. ಸ್ವಚ್ಚ ಪರಿಸರದ ಬಗ್ಗೆ ಜಾಗ್ರೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿಯೂ ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ವಿವಿಧ ಕಾರ್ಯಯೋಜನೆ ಹಮ್ಮಿಕೊಳ್ಳಲಿದೆ. ಸ್ವಚ್ಚ ಕೊಡಗು ಸುಂದರ ಕೊಡಗು ಅಭಿಯಾನಕ್ಕೆ ಜಿಲ್ಲೆಯಾದ್ಯಂತ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರಕಿದ್ದು ಸಮಧಾನ ತಂದಿದೆ. ಅಭಿಯಾನದ ಮೂಲಕ ಕೊಡಗಿನಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಮತ್ತಷ್ಟು ಒತ್ತು ನೀಡಿದೆ.

ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ಅಧ್ಯಕ್ಷ, ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್

ಕೊಡಗು ಜಿಲ್ಲೆಯ ಸುಂದರ ಪ್ರಕೃತಿ ಸಂಪನ್ಮೂಲ ಕಾಪಾಡದಿದ್ದರೆ ಭವಿಷ್ಯದಲ್ಲಿ ತೊಡಕು ಉಂಟಾಗುತ್ತದೆ. ಈಗಾಗಲೇ ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಮಡಿಕೇರಿಯಲ್ಲಿ 2 ಲೀಟರ್ ಗಿಂತ ಕಡಿಮೆ ಸಂಗ್ರಹ ಸಾಮರ್ಥ್ಯದ ನೀರಿನ ಬಾಟಲ್‌ಗಳ ಮಾರಾಟ, ಹಾಗೂ ಬಳಕೆಯನ್ನೂ ನಿಷೇಧಿಸಲಾಗಿದೆ. ಇದರಿಂದ ಕಸದ ಪ್ರಮಾಣ ಕಡಿಮೆಯಾಗಿದೆ. ಜಿಲ್ಲೆಯ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಒಂದು ದಿನಕ್ಕೆ ಈ ಕಾರ್ಯಕ್ರಮಕ್ಕೆ ಮೀಸಲಾಗದೆ ವರ್ಷವಿಡಿ ಸ್ವಚ್ಛತಾ ಜಾಗೃತಿ ಹೊಂದಿರಬೇಕು. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವುದು ಕಂಡುಬAದಲ್ಲಿ ಸಂಬAಧಿಸಿದ ಸ್ಥಳೀಯ ಆಡಳಿತ ಕೂಡಲೇ ಕ್ರಮವಹಿಸಬೇಕು.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ