ಮೈಸೂರು: ಗೀತಾ ಶಿಶು ಶಿಕ್ಷಣ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಪ್ರೊ.ಬಿ.ಎಸ್.ಪಂಡಿತ್ ಅವರ ಸ್ಮರಣಾರ್ಥ ನ.8 ಮತ್ತು 9ರಂದು ಕೆ.ಆರ್.ಎಸ್ ರಸ್ತೆಯ ಜಿಎಸ್‌ಎಸ್‌ಎಸ್ ಮಹಿಳಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾರ್ತಿಕ ಮಾಸದ ಶಾಸ್ತ್ರೀಯ ಸಂಗೀತ ‘ಸರಸ್ವತಿ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಇಂಜಿನಿಯರಿಂಗ್ ಕಾಲೇಜಿನ ಎಂ. ಗೋವಿಂದ ರಾವ್ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಸಂಗೀತ ಕಾರ್ಯಕ್ರಮದಲ್ಲಿ ನ.8ರಂದು ಸಂಜೆ 6.30ಕ್ಕೆ ಒಡಿಸ್ಸಿ ನೃತ್ಯ ಪ್ರದರ್ಶನ ನಡೆಯಲಿದ್ದು, ಪ್ರಖ್ಯಾತ ಒಡಿಸ್ಸಿ ನೃತ್ಯ ಕಲಾವಿದೆ ವಿದುಷಿ ಸುಜಾತಾ ಮೊಹಾಪಾತ್ರ ಅವರು ಕಲಾರಸಿಕರಿಗೆ ತಮ್ಮ ಒಡಿಸ್ಸಿ ನೃತ್ಯವನ್ನು ಸಾದರಪಡಿಸಲಿದ್ದಾರೆ. ನೃತ್ಯಕ್ಕೆ ಗಾಯಕರಾಗಿ ರಾಜೇಶ್ ಕುಮಾರ್ ಲೆಂಕಾ, ಕೊಳಲುವಾದಕರಾಗಿ ಸೌಮ್ಯರಂಜನ್ ಜೋಶಿ, ಒಡಿಸ್ಸಿ ಮರ್ದಾಳ ವಾದಕರಾಗಿ ಏಕಲಬ್ಯ ಮುದುಳಿ ಸಾಥ್ ನೀಡಲಿದ್ದಾರೆ.
ನ. 9ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಗಂಗಾ ಶಶಿಧರನ್ ಅವರು ತಮ್ಮ ಗುರು ಸಿ.ಎಸ್.ಅನುರೂಪ್ ಅವರೊಂದಿಗೆ ವಯೋಲಿನ್ ಡ್ಯುಯೆಟ್ ಕಛೇರಿ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮಕ್ಕೆ ಬರಲು ಪ್ರೇಕ್ಷಕರಿಗೆ ಅನುಕೂಲವಾಗುವಂತೆ ನಗರದ ವಿವಿಧ ಬಡಾವಣೆಗಳಿಂದ ವಾಹನ ವ್ಯವಸ್ಥೆ ಮಾಡಲಾಗಿದೆ. ಮಾಹಿತಿಗೆ ಎಸ್.ನವೀನ್‌ಕುಮಾರ್ ಅವರನ್ನು ಮೊಬೈಲ್ ಸಂಖ್ಯೆ 9611959996 ಮೂಲಕ ಸಂಪರ್ಕಿಸಲು ಹೇಳಿಕೆಯಲ್ಲಿ ಸಂಘಟಕರು ಕೋರಿದ್ದಾರೆ.