ಮಂಡ್ಯ: ಭಾರತೀಯ ನಾಟ್ಯವು ಮನೋರಂಜನೆಗೆ ಸೀಮಿತವಾಗದೆ ಆತ್ಮರಂಜನೆಯವರೆಗಿನ ವಿಷಯವನ್ನಿಟ್ಟುಕೊಂಡಿದೆ. ನಾಟ್ಯಶಾಸ್ತ್ರದಲ್ಲಿ ಕೃಷ್ಣನ ಹಾವ-ಭಾವಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಸಾಹಿತಿ ತೈಲೂರು ವೆಂಕಟಕೃಷ್ಣ ಹೇಳಿದರು.
ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಏರ್ಪಡಿಸಿದ್ದ 28ನೇ ವರ್ಷದ ಗುರುದೇವೋತ್ಸವದ ಶಾಸ್ತ್ರೀಯ ನೃತ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಟ್ಯದಲ್ಲಿ ಭಾವ-ರಾಗ-ತಾಳಗಳ ಒಂದು ಪಾಕವಿದೆ. ಅದು ನಮ್ಮ ಮೈ-ಮನಗಳನ್ನು ಹದವಾಗಿಸಿ ಧನ್ಯರನ್ನಾಗಿ ಮಾಡುತ್ತದೆ. ಅಂತರಂಗದ ಆನಂದವನ್ನು ನಾಟ್ಯದ ಮೂಲಕ ಹೊರತಂದು, ಅದನ್ನು ಆಸ್ವಾದಿಸುವವರನ್ನು ಅಂತರಂಗಕ್ಕೆ ಒಯ್ಯುವ ಜಾಣ್ಮೆ ನಮ್ಮ ನಾಟ್ಯಕಲೆಯಲ್ಲಿದೆ ಎಂದು ಬಣ್ಣಿಸಿದರು.
ಭಾರತ ಹಲವು ಸಂಸ್ಕೃತಿಗಳ ನೆಲೆವೀಡು. ಇದರಲ್ಲಿ ಭರತನಾಟ್ಯವೂ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ನಾಟ್ಯವು ಹಲವು ಬಗೆಗಳಲ್ಲಿ ಬೆಳೆದು ಬಂದಿದೆ. ನಾಟ್ಯರಂಗಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವುದು ಹಿಂದಿನ ಕಾಲದಲ್ಲಿ ನಟರ ವಾಡಿಕೆಯಾದರೆ, ಇದನ್ನು ಪ್ರದರ್ಶಿಸಲು ಇಂದು ಕಲಾ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳು ಹೊಸದಾಗಿ ಸೇರ್ಪಡೆಯಾಗಿವೆ ಎಂದರು.
ಗುರುದೇವ ಲಲಿತಕಲಾ ಅಕಾಡೆಮಿ ಹಿರಿಯ ಕಲಾವಿದೆ ಡಾ.ನಂದಿನಿ ಕೇಶವ್ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವುದೇ ವಿದ್ಯೆ, ಕಲೆ ಒಲಿಯಬೇಕಾದರೆ ಮೊದಲು ಅಹಂಕಾರವನ್ನು ಬಿಡಬೇಕು. ಅಂತೆಯೇ ಗುರಿ ಇಟ್ಟುಕೊಳ್ಳಬೇಕಾದರೆ ನಿರ್ಧಾರ, ಸಮರ್ಪಣೆ, ಶಿಸ್ತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನೃತ್ಯ ಅಭ್ಯಸಿಸುವ ವಿದ್ಯಾರ್ಥಿಗಳು ಸಮಯ ಮತ್ತು ವಸ್ತ್ರದ ಬಗ್ಗೆ ಶಿಸ್ತು ರೂಢಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಭರತನಾಟ್ಯಕ್ಕೆ ಏಕಾಗ್ರತೆ ಮತ್ತು ಮನಸ್ಸನ್ನು ಆನಂದವಾಗಿಡುವ ಶಕ್ತಿ ಇದೆ ಎಂದು ಹೇಳಿದರು.
ಚನ್ನಪಟ್ಟಣದ ಭರತನಾಟ್ಯ ವಿದುಷಿ ಸುಜೇಂದ್ರಬಾಬು, ಗುರುದೇವ ಲಲಿತಕಲಾ ಅಕಾಡೆಮಿ ನಿರ್ದೇಶಕಿ ಡಾ.ಚೇತನಾ ರಾಧಾಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ ಉಪಸ್ಥಿತರಿದ್ದರು. ಇದೇ ವೇಳೆ ಅಕಾಡೆಮಿಯ ಕಿರಿಯ ಹಾಗೂ ಹಿರಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿಧವಿಧವಾದ ನೃತ್ಯಗಳ ಸಮಾಗಮವು ನೋಡುಗರನ್ನು ಆಕರ್ಷಿಸಿದವು.