ವಿಜಯವಾಣಿ ಸುದ್ದಿಜಾಲ ಧಾರವಾಡ
ಜಾಗದ ವಿಷಯಕ್ಕೆ ಸಂಬ0ಧಿಸಿ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದಲ್ಲಿ 2 ಕುಟುಂಬಗಳ ಮಧ್ಯೆ ಬುಧವಾರ ಜಗಳ ನಡೆದಿದ್ದು, ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿವೆ.
ಗ್ರಾಮ ಜೈನರ ಕುಟುಂಬದವರು ಮರಡ್ಡಿ ಕುಟುಂಬದವರಿ0ದ 15 ಗುಂಟೆ ಜಾಗ ಖರೀದಿಸಿದ್ದರು. ಸರ್ಕಾರಿ ಮೋಜಣಿದಾರರಿಂದ ಅಳತೆ ಮಾಡಿಸಿದ್ದ ಜೈನರ ಕುಟುಂಬದವರು ಬುಧವಾರ ತಮ್ಮ ಜಾಗಕ್ಕೆ ತಂತಿ ಬೇಲಿ ಹಾಕುತ್ತಿದ್ದರು. ಈ ವೇಳೆ ಮರಡ್ಡಿ ಕುಟುಂಬದವರು ಸ್ಥಳಕ್ಕೆ ತೆರಳಿ ತಕರಾರು ತೆಗೆದಿದ್ದಾರೆ. ಎರಡು ಕುಟುಂಬದವರ ಮಧ್ಯೆ ಮಾತು ಬೆಳೆದು ಮಾರಾಮಾರಿ ನಡೆದಿದೆ. ಶ್ರೀಶೈಲ ಜೈನರ ಮೇಲೆ ಕಲ್ಲು, ಇಟ್ಟಿಗೆಯಿಂದ ಹಲ್ಲೆ ಮಾಡಲಾಗಿದೆ. ಅಲ್ಲದೆ, ಅವರ ಮನೆಗೆ ಕಲ್ಲು ಎಸೆದು ಕಿಟಕಿಯ ಗಾಜು ಒಡೆಯಲಾಗಿದೆ. ಮನೆಯಲ್ಲಿದ್ದ ಹೆಣ್ಣು ಮಗಳ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಶ್ರೀಶೈಲ ಪತ್ನಿ ಪ್ರೇಮಾ ಸುದ್ದಿಗಾರರ ಎದುರು ಅಳಲು ತೋಡಿಕೊಂಡರು.
ಮರಡ್ಡಿ ಕುಟುಂಬವರು ಹಲ್ಲೆ ಮಾಡಿ ದೌರ್ಜನ್ಯ ಎಸಗಿದರೂ ಪೊಲೀಸರು ಪೂರ್ವಾಪರ ವಿಚಾರಿಸದೆ ಶ್ರೀಶೈಲ ಹಾಗೂ ಅವರ ಅಣ್ಣನ ಮಕ್ಕಳನ್ನು ಬಂಧಿಸಿದ್ದಾರೆ. ಮರಡ್ಡಿ ಕುಟುಂಬದವರ ವಿರುದ್ಧ ಸಂಜೆ 5 ಗಂಟೆಗೆ ನವಲಗುಂದ ಠಾಣೆಗೆ ದೂರು ಕೊಡಲು ಹೋದರೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ದೂರು ಪಡೆದು ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ರಕ್ಷಣೆ ನೀಡಬೇಕಾದ ಪೊಲೀಸರು, ಮರಡ್ಡಿ ಕುಟುಂಬದವರಿ0ದ ಮೊದಲು ದೂರು ಪಡೆದು ನಮ್ಮವರನ್ನು ಬಂಧಿಸಿದ್ದಾರೆ. ಯಾರದೋ ಒತ್ತಡಕ್ಕೆ ಮಣಿದು ನವಲಗುಂದ ಠಾಣೆ ಪೊಲೀಸರ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗುವುದು ಎಂದು ಪ್ರೇಮಾ ಹಾಗೂ ಕುಟುಂಬದವರು ತಿಳಿಸಿದರು.