ಮದ್ದೂರು: ಪಟ್ಟಣದ ಕೆಮ್ಮಣ್ಣುನಾಲೆ ಸರ್ಕಲ್ ಬಳಿ ಮಂಗಳವಾರ ರಾತ್ರಿ 11 ಗಂಟೆ ಸಮಯದಲ್ಲಿ ಪ್ರೀತಿ ವಿಚಾರಕ್ಕೆ 2 ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ, 4 ಮಂದಿ ಗಾಯಗೊಂಡಿದ್ದಾರೆ.
ಪಟ್ಟಣದ ಸಿದ್ದಾರ್ಥನಗರದ ರಘು, ಗಂಗಾಧರ ಅಲಿಯಾಸ್ ಜೋಗಿ, ಯೋಗೇಶ ಹಾಗೂ ಸುಧಾ ಅವರು ಗಾಯಗೊಂಡಿದ್ದು, ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಇವರಿಗೆ ಕೆಮ್ಮಣ್ಣುನಾಲೆ ಸರ್ಕಲ್ ಬಳಿ ವಾಸವಿರುವ ವೀರಸ್ವಾಮಿ ಹಾಗೂ ಅಪ್ರಾಪ್ತ (ಕಾನೂನು ಸಂಘರ್ಷಕ್ಕೊಳಗಾದ ಬಾಲಕ) ಸೇರಿದಂತೆ ಆರು ಮಂದಿ ಹಲ್ಲೆ ಮಾಡಿದ್ದಾರೆ.
ರಘು ಹಾಗೂ ಸ್ನೇಹಿತ ಗಂಗಾಧರ ಅಲಿಯಾಸ್ ಜೋಗಿ ಇಬ್ಬರು ಮಂಗಳವಾರ ರಾತ್ರಿ 11 ಗಂಟೆ ಸಮಯದಲ್ಲಿ ಕೆಮ್ಮಣ್ಣುನಾಲೆ ಸರ್ಕಲ್ ಇದ್ದಾಗ ಆರು ಮಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಮ್ಮ ಬೀದಿಯ ಹುಡುಗಿಯ ಮೇಲೆ ಕಣ್ಣು ಹಾಕುತ್ತೀರಾ ಎಂದು ಇಬ್ಬರನ್ನು ತಳ್ಳಾಡಿದ್ದಾರೆ. ನಂತರ ಇಬ್ಬರು ಅಲ್ಲಿಂದ ತೆರಳಲು ಮುಂದಾದಾಗ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ.