ಜಿಲ್ಲೆ

ಅಧಿಕಾರಿಗಳೊಂದಿಗೆ ಗ್ರಾಪಂ ಸದಸ್ಯರ ಮಾತಿನ ಚಕಮಕಿ

ಕೆ.ಆರ್.ಸಾಗರ: ಕೆ.ಆರ್.ಸಾಗರ ಗ್ರಾಪಂ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣವನ್ನು ಗುರುವಾರ ವಶಕ್ಕೆ ಪಡೆಯಲು ಬಂದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ದಾಖಲೆ ನೀಡುವಂತೆ ಆಗ್ರಹಿಸಿ ಗ್ರಾಪಂ ಸದಸ್ಯರು ಮಾತಿನ ಚಕಮಕಿ ನಡೆಸಿದರು. ಪರಿಣಾಮ ಅಧಿಕಾರಿಗಳು ಬರಿಗೈಯಲ್ಲಿ ವಾಪಸಾದರು.


ಅಮೃತ್ ಯೋಜನೆ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಅನುದಾನ ಹಾಗೂ ನರೇಗಾ ಯೋಜನೆಯಡಿ ಲಕ್ಷಾಂತರ ರೂ. ಖರ್ಚು ಮಾಡಿ ಗ್ರಾಮದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿತ್ತು. ಆದರೆ ಕಂದಾಯ ಇಲಾಖೆ ಜಾಗದಲ್ಲಿ ಗ್ರಾಪಂ ಅನಧಿಕೃತವಾಗಿ ಕ್ರೀಡಾಂಗಣ ನಿರ್ಮಿಸಿರುವ ಕಾರಣ ಮಂಡ್ಯ ಜಿಲ್ಲಾಧಿಕಾರಿ ಅದೇಶದಂತೆ ಗುರುವಾರ ಉಪತಹಸೀಲ್ದಾರ್ ಸಾಕಮ್ಮ ನೇತೃತ್ವದಲ್ಲಿ ಗ್ರಾಮಕ್ಕೆ ಆಗಮಿಸಿದ ರಾಜಸ್ವ ನೀರಿಕ್ಷಕ ಬಸವರಾಜು, ಗ್ರಾಮಲೆಕ್ಕಿಗ ರಘು ಕ್ರೀಡಾಂಗಣದ ಕೀ ಪಡೆಯಲು ಮುಂದಾದರು. ಈ ವೇಳೆ ಅಧಿಕಾರಿಗಳು ಮತ್ತು ಗ್ರಾಪಂ ಸದಸ್ಯರ ನಡುವ ಮಾತಿನ ಚಕಮಕಿ ನಡೆಯಿತು.


ಉಪವಿಭಾಗಾಧಿಕಾರಿಗಳ ಮೌಖಿಕ ಆದೇಶದಂತೆ ಕಂದಾಯ ಇಲಾಖೆಯಲ್ಲಿನ ಜಾಗದಲ್ಲಿನ ನಿರ್ಮಿಸಿರುವ ಈ ಒಳಾಂಗಣ ಕ್ರೀಡಾಂಗಣ ಪರಿಶೀಲನೆ ಮಾಡಿ ಕೀ ಪಡೆಯಲು ಬಂದಿದ್ದು, ಗ್ರಾಪಂ ಪಿಡಿಒಗೂ ಮಾಹಿತಿ ನೀಡಿದ್ದೇವೆ. ನಾವು ಹಿರಿಯ ಅಧಿಕಾರಿಗಳ ಆದೇಶ ಪಾಲಿಸುತ್ತಿದ್ದು, ದಾಖಲೆಯ ಪ್ರಕಾರ ಕಂದಾಯ ಇಲಾಖೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣವಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ವಿವರಿಸಿದರು.


ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಪಂ ಸದಸ್ಯರು, ಕೆ.ಆರ್.ಸಾಗರ ಸೇರಿದಂತೆ ಸುತ್ತಮುತ್ತಲಿನ ಜನರ ಉಪಯೋಗಕ್ಕಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ನಿರ್ಮಿಸಲಾಗಿದೆ. ಖುದ್ದು ಜಿಲ್ಲಾಧಿಕಾರಿಗಳು ಬಂದು ದಾಖಲೆ ಪರಿಶೀಲಿಸಲಿ. ಯಾರೋ ದೂರು ನೀಡಿದರು ಎಂದು ಒಳಾಂಗಣ ಕ್ರೀಡಾಂಗಣ ವಶಕ್ಕೆ ಪಡೆಯುವುದು ಎಷ್ಟು ಸೂಕ್ತ? ಎಂದು ಮಾಜಿ ಗ್ರಾಪಂ ಅಧ್ಯಕ್ಷ ನರಸಿಂಹ ಆಕ್ರೋಶ ವ್ಯಕ್ತ ಪಡಿಸಿದರು. ಇದಕ್ಕೆ ಸದಸ್ಯರು ಧ್ವನಿಗೂಡಿಸಿದರು. ಈ ವೇಳೆ ಮಾತಿನ ಚಕಮಕಿ ಏರ್ಪಟ್ಟಿತು. ಪರಿಣಾಮ ಅಧಿಕಾರಿಗಳು ಬರಿಗೈಯಲ್ಲಿ ವಾಪಸಾದರು.
ಗ್ರಾಪಂ ಮಾಜಿ ಅಧ್ಯಕ್ಷರಾದ ನರಸಿಂಹ, ನಾಗೇಂದ್ರಕುಮಾರ್, ಸದಸ್ಯ ಕೆ.ರಾಜು, ಮಾಜಿ ಸದಸ್ಯ ಶ್ರೀ ನಿವಾಸ್, ಪಿಡಿಒ ಬಸವರಾಜು, ಗ್ರಾಮಸ್ಥರು ಇದ್ದರು.