ಚಿತ್ರದುರ್ಗ: ಹಕ್ಕುಪತ್ರ ದೊರೆತಿರುವುದರಿಂದ ಇನ್ನು ಮುಂದೆ ಮನೆ-ನಿವೇಶನಗಳಿಗೆ ಸಂಬಂಧಿಸಿದಂತೆ,ಯಾವುದೇ ಸಮಸ್ಯೆಗಳು ಎದುರಾಗದೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ಹಕ್ಕುಪತ್ರ ಪಡೆದ ಚಿತ್ರದುರ್ಗ ತಾಲೂಕು ಜೆ.ಎನ್.ಕೋಟೆಯ ಅರ್ಹ ಕುಟುಂಬಗಳಿಗೆ ಭರವಸೆ ನೀಡಿದರು.
ಸರ್ಕಾರಿ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿದ್ದ 52 ಕುಟುಂಬಗಳಿಗೆ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ,ಹಕ್ಕುಪತ್ರ ವಿತರಿಸಿ ಮಾತನಾಡಿ, ರಾಜ್ಯಸರ್ಕಾರ ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ನಿವೇ ಶನ ಸಕ್ರಮಕ್ಕೆ ಅವಕಾಶ ನೀಡಿತ್ತು. ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದಂತಹ ಎಲ್ಲರಿಗೂ ಕಂದಾಯ ಇಲಾಖೆ ನಿಯಮಾನುಸಾರ ಹಕ್ಕು ಪತ್ರ ವಿತರಿಸಿದೆ. ಆ ಮೂಲಕ ನಿವೇಶನದ ಸಂಪೂರ್ಣ ಮಾಲಿಕತ್ವವನ್ನು ಅವರಿಗೆ ಒದಗಿಸಿದೆ.
ನನ್ನ ಕ್ಷೇತ್ರದ ಎಲ್ಲ ಕಡೆ ಪರಿಶೀಲನೆ ನಡೆಸಲಾಗಿದೆ. ಆದರೆ ಜೆ.ಎನ್.ಕೋಟೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ,ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿ ಸಿಕೊಂಡ ಫಲಾನುಭವಿಗಳು ದೊರಕಿದ್ದಾರೆ. ಬಾಕಿ ಇರುವ 75 ಅರ್ಜಿದಾರರಿಗೂ ಶೀಘ್ರ ಬಾಕಿ 20 ದಿನದೊಳಗೆ ಹಕ್ಕು ಪತ್ರ ವಿತರಿಸಲಾಗುವು ದು ಎಂದರು.
ತಹಸೀಲ್ದಾರ್ ಜಿ.ಎಚ್.ಸತ್ಯನಾರಾಯಣ ಮಾತನಾಡಿ,2015ರ ಪೂರ್ವದಲ್ಲಿ ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ವರು ಕಳೆದ ಮಾರ್ಚ ತಿಂಗಳ ಒಳಗೆ ಅರ್ಜಿ ಸಲ್ಲಿಸಿದ್ದರೆ ಅಂಥವರಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದೆ. ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿ ಕೊಂಡಿರುವವರು ಇತರೆ ನಿವೇಶನ ಮತ್ತು ಮನೆ ಹೊಂದಿರಬಾರದು. ಒಂದು ವೇಳೆ ಅಂಥ ದಾಖಲೆಗಳು ಕಂಡು ಬಂದರೆ ಹಕ್ಕು ಪತ್ರ ವಜಾ ಮಾಡಲಾಗುವುದು. ನಿವೇಶನ ಅಳತೆ ಅನುಸಾರ ಸಾಂಕೇತಿಕ ಶುಲ್ಕವನ್ನು ಪಡೆದು ಹಕ್ಕು ಪತ್ರ ವಿತರಿಸಲಾಗುತ್ತಿದೆ ಎಂದರು.
ಕುಡಾ ಅಧ್ಯಕ್ಷ ಜಿ.ಟಿ.ಸುರೇಶ್‌ಸಿದ್ದಾಪುರ, ಕಂದಾಯ ನಿರೀಕ್ಷಕ ಶರಣಬಸವೇಶ್ವರ,ಜೆ.ಎನ್.ಕೋಟೆ ಗ್ರಾಪಂ ಸದಸ್ಯರಾದ ಶಿವಣ್ಣ,ಶಿವಮೂರ್ತಿ, ಪಿಡಿಒ ನಿರ್ಮಲ,ಗ್ರಾಮ ಆಡಳಿತಧಿಕಾರಿ ಶ್ರೀನಿವಾಸ್,ಪಾಂಡುರಂಗಪ್ಪ,ಅಣ್ಣೇಶ್ ಮತ್ತಿತರರು ಇದ್ದರು.
ಲಾಟರಿ ಮೂಲಕ ಆಯ್ಕೆ
ವಿವಿಧ ಅಭಿವೃದ್ಧಿ ನಿಗಮಗಳ ಯೋಜನೆಗಳಡಿ ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳ ಆಯ್ಕೆಯನ್ನು ಲಾಟರಿ ಮೂಲಕ ಮಾಡಲಾಯಿತು. ಡಿ.ದೇವರಾಜಅರಸು ಹಿಂದುಳಿದ ವರ್ಗಗಳ ನಿಗಮ,ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ,ವಾಲ್ಮೀಕಿ ಅಭಿವೃದ್ಧಿ ನಿಗಮ,ಅದಿಜಾಂಬವ ಅಭಿವೃದ್ಧಿ ನಿಗಮಗಳ ವಿವಿಧ ರೀತಿಯ ಯೋಜನೆಗಳಡಿ ಅರ್ಹರನ್ನು ಆಯ್ಕೆ ಮಾಡಲಾಯಿತು.
ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಮಾತನಾಡಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ಕೆಲವೊಂದು ಯೋಜನೆಗಳಡಿ ಫಲಾನುಭವಿ ಗಳ ಸಂಖ್ಯೆ ಕಡಿಮೆ ಇರುವುದರಿಂದ ಈ ಕ್ರಮ ಅನಿವಾರ‌್ಯವಾಗಿತ್ತು. ಆಯ್ಕೆಯಾಗದೇ ಇರುವಂಥವರು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕೆಂದರು. ನಿಗಮದಿಂದ ಪಡೆದ ಆರ್ಥಿಕ ನೆರವನ್ನು ಸದುಪಯೋಗ ಮಾಡಿಕೊಳ್ಳ ಬೇಕೆಂದರು. ವಿವಿಧ ನಿಗಮಗಳ ಅಧಿಕಾರಿಗಳಿದ್ದರು.
ಸಿಸಿ ರಸ್ತೆ ಕಾಮಗಾರಿಗೆ ಚಾಲನೆ
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಶನಿವಾರ ನಗರದ ಗೋಪಾಲಪುರ ರಸ್ತೆ 4ನೇ ಕ್ರಾಸ್,ಚಿತ್ರದುರ್ಗ ತಾಲೂಕು ದೊಡ್ಡಸಿದ್ದವ್ವನಹಳ್ಳಿಯಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಡಿಎಸ್‌ಹಳ್ಳಿ ರಸ್ತೆಗೆ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ 50 ಲಕ್ಷ ರೂ. ಹಾಗೂ ಗೋಪಾಲಪುರ 4ನೇ ಕ್ರಾಸ್ ರಸ್ತೆಗೆ 40 ಲಕ್ಷ ರೂ.ಅನುದಾನ ಬಿಡುಗಡೆಯಾಗಿದೆ ಎಂದರು.
ನಗರಸಭೆ ಸದಸ್ಯೆ ಅನುರಾಧ ರವಿಕುಮಾರ್,ಗ್ರಾಪಂ ಸದಸ್ಯರಾದ ರಾಜಶೇಖರ್,ರುದ್ರೇಶ್,ಮುಖಂಡರಾದ ಮುಖಂಡರಾದ ರವಿಕುಮಾರ್,ರವಿ,ಮಂಜು,ಕುಮಾರ್, ಸಂಜೀವ್‌ರೆಡ್ಡಿ,ನವಕೋಟಿ,ಲಕ್ಷ್ಮಣ್,ಜಲತಜ್ಞ ದೇವರಾಜ್ರೆಡ್ಡಿ ಮತ್ತಿತರರು ಇದ್ದರು.
----