ಜಿಲ್ಲೆ

ಜನರ ಅವಶ್ಯಕತೆ ತಕ್ಕಂತೆ ಲೈಸೆನ್ಸ್: ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಬಂದೂಕು ಪರವಾನಗಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ ಜನರ ಅವಶ್ಯಕತೆಗೆ ತಕ್ಕಂತೆ ಲೈಸೆನ್ಸ್ ನೀಡಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ನಗರದ ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರು ಬಂದೂಕು ತರಬೇತಿಯನ್ನಷ್ಟೇ ಪಡೆದಿದ್ದಾರೆಯೇ ಹೊರತು ಎಲ್ಲರಿಗೂ ಲೈಸೆನ್ಸ್ ಸಿಗುವುದಿಲ್ಲ. ಅದಕ್ಕೆ ಸಕಾರಣಗಳನ್ನು ನೀಡಬೇಕಾಗುತ್ತದೆ. ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದರು.

ತಮ್ಮ ಬಳಿ ಇರುವ ಬಂದೂಕಿನ ನಿರ್ವಹಣೆ ಜವಾಬ್ದಾರಿ, ಸಂರಕ್ಷಣೆ ಮುಖ್ಯ. ಎಷ್ಟೋ ಜನರು ಪರವಾನಗಿಯನ್ನು ಇಲಾಖೆಗೆ ವಾಪಸ್ ಕೊಟ್ಟಿರುವ ನಿರ್ದಶನಗಳಿವೆ. ನಿರ್ಲಕ್ಷೃ, ಕೋಪ, ಪ್ರದರ್ಶನದ ಮನೋಭಾವದಿಂದಾಗಿ ಕೆಲವೊಮ್ಮೆ ಬಂದೂಕು ದುರ್ಬಳಕೆಯಾಗುವ ಸಾಧ್ಯತೆ ಇದೆ. ಆಯುಧಗಳನ್ನು ಹೊಂದುವುದು ಹುಡುಗಾಟಿಕೆಯಲ್ಲ. ಅದೊಂದು ಜವಾಬ್ದಾರಿ. ಹಾಗೆಯೇ ಇಂತಹ ಆಯುಧಗಳನ್ನು ಹೊಂದಲು ವಯಸ್ಸು, ದೈಹಿಕ ಸದೃಢತೆ ಮತ್ತು ಮಾನಸಿಕ ಸ್ಥಿರತೆಯೂ ಮುಖ್ಯವಾಗುತ್ತದೆ ಎಂದು ಹೇಳಿದರು.

ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಇ.ಗಂಗಾಧರಸ್ವಾಮಿ, ಡಿವೈಎಸ್‌ಪಿ ಎಲ್.ಕೆ.ರಮೇಶ್, ಜಿಲ್ಲಾ ಸಶಸ್ತ ಮೀಸಲು ಪಡೆಯ ಡಿವೈಎಸ್‌ಪಿ ಎಸ್.ರಾಚಯ್ಯ, ಆರ್‌ಪಿಐ ಬಿ.ಜಗದೀಶ್, ಆರ್‌ಐಎಸ್‌ಗಳಾದ ಮುಲ್ಲಾಸಾಬ್, ಬೆಟ್ಟಸ್ವಾಮಿ, ಎಆರ್‌ಎಸ್‌ಐ ರಘುಮೂರ್ತಿ, ತರಬೇತುದಾರರಾದ ಸತೀಶ್, ಹರೀಶ್ ಇತರರಿದ್ದರು. ಶಿಬಿರದಲ್ಲಿ ತರಬೇತಿ ಪಡೆದಿದ್ದ 102 ಜನರಿಗೆ ಪ್ರಮಾಣಪತ್ರ ಮತ್ತು ತರಬೇತಿಯ ಅಂತಿಮಘಟ್ಟದಲ್ಲಿ ಫೈರಿಂಗ್ ಸ್ಪರ್ಧೆಯಲ್ಲಿ ಬಳಸಿದ್ದ ಟಾರ್ಗೆಟ್ ಶೀಟ್‌ಗಳನ್ನು ವಿತರಿಸಲಾಯಿತು. ಅತ್ಯುತ್ತಮ ಫೈರಿಂಗ್ ಪ್ರದರ್ಶನ ನೀಡಿದವರಿಗೆ ಬಹುಮಾನ ನೀಡಲಾಯಿತು.