ಕೊಪ್ಪಳದಲ್ಲಿ ಬುಧವಾರ ಡಿಸಿ ಎಂ.ಸುಂದರೇಶ ಬಾಬು ಅಧ್ಯಕ್ಷತೆಯಲ್ಲಿ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆ ನಡೆಯಿತು.  
ಜಿಲ್ಲೆ

ಪೌರಕಾರ್ಮಿಕರಿಗೆ ಡಿಸೆಂಬರ್ ಒಳಗೆ ನಿವೇಶನ ಒದಗಿಸಿ: ಕೊಪ್ಪಳ ಡಿಸಿ ಸುಂದರೇಶ ಬಾಬು ಸೂಚನೆ

ಕೊಪ್ಪಳ: ಜಿಲ್ಲೆಯ ಸಫಾಯಿ ಕರ್ಮಚಾರಿ/ಪೌರಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ನಿಗದಿತ ಅವಧಿಯೊಳಗೆ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ಎಂ.ಸುಂದರೇಶ ಬಾಬು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳು ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರಂತರವಾಗಿ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಬೇಕು. ನವೆಂಬರ್ ಒಳಗೆ ಎಸ್‌ಬಿಐ ವಿಮೆ ಮಾಡಿಸಬೇಕು. ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು. ನಿವೇಶನ ಇರುವವರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ತಿಳಿಸಬೇಕು. ಯೋಜನೆ ಇಷ್ಟವಿಲ್ಲದಿದ್ದಲ್ಲಿ ಆಶ್ರಯ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಸಹಕಾರ ನೀಡಬೇಕು. ಡಿಸೆಂಬರ್ ಒಳಗೆ ಎಲ್ಲರಿಗೂ ನಿವೇಶನ ಹಂಚಿಕೆ ಮಾಡಬೇಕು. ಅವಶ್ಯವಿರುವ ಸಕ್ಕಿಂಗ್, ಜಟ್ಟಿಂಗ್ ಮಷೀನ್ ಖರೀದಿಸಬೇಕು. ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ, ಇಎಸ್‌ಐ, ಪಿಎಫ್ ಸೌಲಭ್ಯಗಳು ಪಾವತಿಯಾದ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಬಾಕಿ ಇದ್ದಲ್ಲಿ ತಕ್ಷಣ ಪಾವತಿಸುವಂತೆ ತಿಳಿಸಿದರು.

ಪೌರಕಾರ್ಮಿಕರಿಗೆ ವರ್ಷದಲ್ಲಿ ಎರಡು ಜೊತೆ ಸಮವಸ್ತ್ರ ಕಡ್ಡಾಯವಾಗಿ ವಿತರಿಸಬೇಕು. ಅವಶ್ಯಕತೆಗೆ ಅನುಗುಣವಾಗಿ ಮುಖಗವಸು, ಕೈಗವಸು, ಬೂಟು, ಮಳೆಯಿಂದ ರಕ್ಷಣೆಗೆ ಕೋಟ್, ಹೆಲ್ಮೆಟ್ ವಿತರಿಸಬೇಕು. ಪ್ರತಿ ತಿಂಗಳಿಗೆ ಅವಶ್ಯವಿರುವಷ್ಟು ಮಾಸ್ಕ್,್ತ ಸ್ಯಾನಿಟೈಸರ್ ನೀಡಬೇಕು. ಟಿಫಿನ್ ವ್ಯವಸ್ಥೆ ಮಾಡಬೇಕು. ಸ್ನಾನದ ಕೊಠಡಿ, ಶೌಚಗೃಹ ವಿಶ್ರಾಂತಿ ಕೋಣೆಗಳನ್ನು ನಿರ್ಮಿಸಬೇಕು. ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಕಾರ್ಮಿಕರಿಗೆ ಅರಿವು ಮೂಡಿಸಬೇಕು. ಅಗತ್ಯ ತಯಾರಿ ಮಾಡಿಕೊಂಡು ಪೌರಕಾರ್ಮಿಕರ ದಿನಾಚರಣೆ ಅಚ್ಚುಕಟ್ಟಾಗಿ ಆಚರಿಸಬೇಕು ಎಂದು ಸೂಚಿಸಿದರು.

ಜಿಪಂ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ.ಕಾಳೆ, ಡಿಎಚ್‌ಒ ಡಾ.ಅಲಕನಂದಾ ಮಳಗಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಈಶ್ವರ ಸವಡಿ ಇತರರಿದ್ದರು.