ವಿಜಯಪುರದ ಬೇಗಂ ತಲಾಬ್ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಪೌರಕಾರ್ಮಿಕರ ದಿನಾಚರಣೆ’ಯನ್ನು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಉದ್ಘಾಟಿಸಿದರು. ಆಯುಕ್ತ ಬದ್ರುದ್ದೀನ್ ಸೌದಾಗರ, ದಿನೇಶ ಹಳ್ಳಿ ಮತ್ತಿತರರಿದ್ದಾರೆ.  
ಜಿಲ್ಲೆ

ಬೇಗಂ ತಲಾಬ್ ಕೆರೆಯಂಗಳದಲ್ಲಿ ಪೌರಕಾರ್ಮಿಕರ ದಿನಾಚರಣೆ

ವಿಜಯಪುರ: ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಪಾತ್ರ ಅತಿಮುಖ್ಯವಾಗಿದೆ. ಪೌರಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರ ಸದುಪಯೋಗ ಪಡೆದುಕೊಂಡು ಉತ್ತಮ ಬದುಕು ರೂಪಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಪೌರಕಾರ್ಮಿಕರಿಗೆ ತಿಳಿಸಿದರು.

ನಗರದ ಬೇಗಂ ತಲಾಬ್ ಆವರಣದಲ್ಲಿ ಶನಿವಾರ ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ‘ಪೌರಕಾರ್ಮಿಕರ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

ಪೌರಕಾರ್ಮಿಕರು ತಮ್ಮ ವೈಯಕ್ತಿಕ ಆರೋಗ್ಯದ ಕಡೆ ಗಮನ ಹರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಪೌರಕಾರ್ಮಿಕ ಮಕ್ಕಳ ಕಲ್ಯಾಣ ನಿಧಿಯಲ್ಲಿ ವಿದ್ಯಾರ್ಥಿವೇತನ, ಲ್ಯಾಪ್‌ಟ್ಯಾಪ್ ವಿತರಣೆ ಹಾಗೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ, ಆರೋಗ್ಯ ತಪಾಸಣೆ ಸೇರಿದಂತೆ ಹಲವು ಕಾರ್ಯಕ್ರಮಗಳಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ ಮಾತನಾಡಿ, ಸಮಾಜದ ಸ್ವಾಸ್ಥ ಕಾಪಾಡುವ ಪೌರಕಾರ್ಮಿಕರ ಸೇವೆ ಅತ್ಯಮೂಲ್ಯವಾಗಿದೆ. ಸ್ವಚ್ಛ ಸುಂದರ ನಗರವನ್ನಾಗಿಸಲು ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ ರಕ್ಷಣೆಗೆ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ಬಹಳಷ್ಟು ಪೌರ ಕಾರ್ಮಿಕರ ಸಮಸ್ಯೆ ಇತ್ಯರ್ಥಪಡಿಸಲಾಗುತ್ತಿದೆ. ಪೌರಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಒದಗಿಸಲಾಗುತ್ತಿದ್ದು, ಪೌರಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕಾಯಂ ನೇಮಕಾತಿ ಹೊಂದಿದ ಪೌರಕಾರ್ಮಿಕರಿಗೆ ಶೀಘ್ರದಲ್ಲಿ ಆದೇಶ ಪತ್ರ ಸಹ ನೀಡಲಾಗುವುದು ಎಂದು ಹೇಳಿದರು.

ವಿಶೇಷ ಭತ್ಯೆ 7 ಸಾವಿರ ರೂ.ಗಳ ಚೆಕ್‌ನ್ನು ಸಾಂಕೇತಿಕವಾಗಿ ಪೌರಕಾರ್ಮಿಕರಿಗೆ ನೀಡಲಾಯಿತು. ಮಹಾನಗರ ಪಾಲಿಕೆ ನೌಕರರ ಸಂಘದಿಂದ ಅತಿ ಹೆಚ್ಚು ಅಂಕ ಪಡೆದ ಪೌರಕಾರ್ಮಿಕರ ಮಕ್ಕಳಿಗೆ ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಪೌರಕಾರ್ಮಿಕರಿಗೆ ಬಹುಮಾನ ವಿತರಣೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ದಿನೇಶ ಹಳ್ಳಿ ಮತ್ತಿತರರಿದ್ದರು.