ಜಿಲ್ಲೆ

ಪೌರಕಾರ್ಮಿಕರ ಸೇವೆ ಅನನ್ಯ

ತಿ.ನರಸೀಪುರ: ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ದುಡಿಯುವ ಪೌರಕಾರ್ಮಿಕರು ನಮ್ಮೆಲ್ಲರ ಜೀವನಾಡಿ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ತುಂಬಲ ಸಿ.ಪ್ರಕಾಶ್ ಬಣ್ಣಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಪೌರ ಕಾರ್ಮಿಕರ ಹಬ್ಬವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣ ಪ್ರದೇಶವಲ್ಲದೆ ನಗರಗಳಲ್ಲಿಯೂ ಸ್ವಚ್ಛತೆ ಹಾಗೂ ಪ್ರತಿಯೊಬ್ಬರ ಆರೋಗ್ಯಕ್ಕಾಗಿ ದುಡಿಯುತ್ತಿರುವ ಪೌರಕಾರ್ಮಿಕರ ಸೇವೆ ಅನನ್ಯವಾದದು ಎಂದರು.

ನಿತ್ಯ ನಗರದ ಸ್ವಚ್ಛತೆಗೆ ಪೌರ ಕಾರ್ಮಿಕರು ದಣಿವರಿಯದೆ ದುಡಿಯುವುದರಿಂದ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕು. ಸರ್ಕಾರ ಪುರಸಭೆ ಮೂಲಕ ಅನುಷ್ಠಾನಗೊಳಿಸುವ ಸೇವಾ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಬಿ.ವಸಂತಾ ಶ್ರೀಕಂಠ ಮಾತನಾಡಿ, ಪೌರ ಕಾರ್ಮಿಕರನ್ನು ನಾಗರಿಕರು ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು.

ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಾದ ಶಿವಣ್ಣ, ಪಿ.ಸೋಮು, ಬಿ.ನಂಜುಂಡ, ಪಲ್ಲಮ್ಮ, ಗಡ್ಡ ಮಹದೇವ, ಆರ್.ಕೃಷ್ಣ, ಪ್ರಸನ್ನ ಹಾಗೂ ಘನತ್ಯಾಜ್ಯ ವಿಲೇವಾರಿ ವಾಹನಗಳ ಚಾಲಕರಾದ ಎನ್.ಸತೀಶ್, ದೇವರಾಜ್ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷೆ ರಾಜೇಶ್ವರಿ ರಾಘವೇಂದ್ರ, ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಸದಸ್ಯರಾದ ಆರ್.ನಾಗರಾಜು, ಆರ್.ಅರ್ಜುನ್, ಎಲ್.ಮಂಜುನಾಥ್, ಸಿಸ್ಟಮ್ ಸಿದ್ದು, ಎಸ್.ಕೆ.ಕಿರಣ್, ರೂಪಶ್ರೀ ಪರಮೇಶ್, ನಾಮ ನಿರ್ದೇಶಿತ ಸದಸ್ಯರಾದ ಕೆ.ಗಣೇಶ್, ಗುರುಸ್ವಾಮಿ, ನಾಗರಾಜು, ಸಬಿಲ್ ಖಾನ್, ಪುರಸಭಾ ಮುಖ್ಯಾಧಿಕಾರಿ ಕೆ.ಸಿ.ತ್ರಿವೇಣಿ ಮತ್ತಿತರರು ಇದ್ದರು.