ಪಟ್ಟಣದಲ್ಲಿ ಪೌರ ಸೇವಾ ನೌಕರರು ಹಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದ್ದಾರೆ. 
ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಪೌರ ಸೇವಾ ನೌಕರರ ಆಗ್ರಹ

ಹೊಳೆನರಸೀಪುರ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಪೌರ ಸೇವಾ ನೌಕರರು ಬುಧವಾರ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದರು.

ಪುರಸಭಾ ಕಚೇರಿ ಮುಂದೆ ಧರಣಿ ಕುಳಿತ ಅವರು ಇಂದಿನಿಂದ ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಚತೆ ಕೆಲಸ, ನೀರು ಸರಬರಾಜು ಹಾಗೂ ಒಳಚರಂಡಿ ನಿರ್ವಹಣೆಯನ್ನು ಸ್ಥಗಿತಗೊಳಿಸುವುದಾಗಿ ಪೌರ ನೌಕರರ ಸಂಘದ ಅಧ್ಯಕ್ಷ ಸುನೀಲ್ ತಿಳಿಸಿದ್ದಾರೆ.

ಬೇಡಿಕೆಗಳು: ರಾಜ್ಯ ನಾಗರಿಕ ಸೇವಾ ನಿಯಮ 1978 ರ ಅನ್ವಯ ಪೌರ ಸೇವಾ ಮತ್ತು ಪಂಚಾಯತ್‌ರಾಜ್ ಇಲಾಖೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಜಿಪಿಎಫ್, ಕೆಜಿಐಡಿ ಹಾಗೂ ಜ್ಯೋತಿ ಸಂಜೀವಿನಿ ಯೋಜನೆಗಳ ಸೌಲಭ್ಯ ನೀಡಬೇಕು. ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸೇವೆ ನಡೆಸಿರುವ ಪೌರ ಸೇವಾ ನೌಕರರನ್ನು ನೇಮಕಾತಿ ಮಾಡಬೇಕು. ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ, ಸ್ಕೇಲ್ ನೌಕರರನ್ನು ಸಕ್ರಮಗೊಳಿಸಬೇಕು. ಕುಡಿಯುವ ನೀರಿನ ಗುಣಮಟ್ಟ ಖಾತ್ರಿಗೊಳಿಸಿಕೊಳ್ಳಲು ಪ್ರಯೋಗಶಾಲಾ ತಾಂತ್ರಿಕರನ್ನು ನೇಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕಸ ಸಂಗ್ರಹಣಾ ವಾಹನ ಸೇರಿದಂತೆ ವಾಹನ ಚಾಲಕರ ಹುದ್ದೆಗಳನ್ನು ಈ ವರೆಗೆ ಕಾಯಂ ಮಾಡಿಲ್ಲ. ಸಮುದಾಯ ಸಂಘಟನಾ ಅಧಿಕಾರಿಗಳ ನೇಮಕದ ಕೊರತೆ ಇದ್ದು, ಅವಕಾಶ ಕಲ್ಪಿಸಬೇಕು. ಪೌರಾಡಳಿತ ವಿಭಾಗದಲ್ಲೂ ವೃಂದ ನೇಮಕಾತಿಗೆ ಅವಕಾಶ ನೀಡಿ ಎಇ ಅವರನ್ನು ತಾಂತ್ರಿಕ ಹುದ್ದೆಗೆ ನೇಮಿಸಬೇಕು. ಘನ ತ್ಯಾಜ್ಯ ನಿರ್ವಹಣೆಗೆ ವಾಹನಗಳ ಬಳಕೆ ಅನಿವಾರ್ಯವಿದೆ. ಅವುಗಳ ನವೀಕರಣಕ್ಕೆ ಅವಕಾಶ ಮಾಡಿಕೊಡಬೇಕಿದೆ. ವಾಹನ ಸಂರಕ್ಷಣೆಗೆ ಮತ್ತು ತಜ್ಞರ ನೇಮಕಾತಿ ಅಗತ್ಯತೆಯನ್ನು ಪರಿಗಣಿಸಬೇಕು. ಗಣಕ ಯಂತ್ರ ನಿರ್ವಾಹಕರು, ಕಿರಿಯ ಇಂಜಿನಿಯರ್, ಒಳ ಚರಂಡಿ ನಿರ್ವಾಹಕರು ಹಾಗೂ ಪೌರಕಾರ್ಮಿಕರು 10 ರಿಂದ 15 ವರ್ಷಗಳಿಂದ ಕೆಲಸ ನಿರ್ವಹಿಸಿರುವರನ್ನು ಕಾಯಂ ಮಾಡಬೇಕು. ಕಾಯಂ ನೌಕರರಿಗೆ ನೀಡಿರುವ ಗೃಹಜ್ಯೋತಿ ಯೋಜನೆಯಡಿ 7.50 ಲಕ್ಷ ಬದಲಿಗೆ 15 ಲಕ್ಷ ರೂ.ಗೆ ಮಂಜೂರುಗೊಳಿಸಬೇಕು ಎಂದು ಆಗ್ರಹಿಸಿದರು.

ಏಪ್ರಿಲ್ 12 ರಿಂದ ಈವರೆಗೂ ರಾಜ್ಯಾದ್ಯಂತ ಪೌರ ಸೇವಾ ನೌಕರರು ಶಾಂತಿಯುತ ಮುಷ್ಕರ ನಡೆಸಿ ಸರ್ಕಾರದ ಮುಂದೆ ಬೇಡಿಕೆಗಳನ್ನು ಇಟ್ಟಿದ್ದರು. ಇಲ್ಲಿಯವರೆಗೆ ಯಾವ ಬೇಡಿಕೆಯೂ ಈಡೇರಿಲ್ಲ. ಹೀಗಾಗಿ ಕಚೇರಿ ಕೆಲಸಗಳು ಮತ್ತು ಪಟ್ಟಣದ ಎಲ್ಲ ನಿರ್ವಹಣೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದೇವೆ. ನಿವೃತ್ತಿ ನಂತರ ಬೇರೆ ಇಲಾಖೆಗಳಂತೆ ನಮ್ಮಗಳ ಕುಟುಂಬ ನಿರ್ವಹಣೆಗೆ ಯಾವುದೇ ಉಪಧನ ನೀಡಲಾಗುತ್ತಿಲ್ಲ. ಪಿಎಫ್, ಕೆಜಿಐಡಿ ವ್ಯವಸ್ಥೆ ಸಹ ಇಲ್ಲ. ಹೀಗಾಗಿ ಅರ್ಥಿಕವಾಗಿ ಸಂಕಷ್ಟ ಎದುರಿಸಬೇಕಾಗುತ್ತಿದೆ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ರಾಜ್ಯ ಸರ್ಕಾರ ತಕ್ಷಣವೇ ಪರಿಗಣಿಸಲಿ.

ನಾಗೇಂದ್ರ ಕುಮಾರ್

ರಾಜಸ್ವ ನಿರೀಕ್ಷಕ, ಪುರಸಭೆ ಹೊಳೆನರಸೀಪುರ