ಶೃಂಗೇರಿ: ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಜು.1ರಿಂದ ಮತ್ತೆ ಧರಣಿ ಆರಂಭಿಸಲಿದ್ದಾರೆ ಎಂದು ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಸುಖೇಶ್ ತಿಳಿಸಿದ್ದಾರೆ.
ಸುಮಾರು 22 ವರ್ಷಗಳಿಂದ ಗುತ್ತಿಗೆ ಹಾಗೂ ನೇರಪಾವತಿ ಅಡಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ನಮ್ಮ ನೌಕರಿ ಕಾಯಂಗೊಳಿಸುವಂತೆ ಸರ್ಕಾರಕ್ಕೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಶೃಂಗೇರಿ ಕ್ಷೇತ್ರಕ್ಕೆ ಪ್ರತಿವರ್ಷ ಸುಮಾರು ಐವತ್ತು ಲಕ್ಷ ಪ್ರವಾಸಿಗರು ಬರುತ್ತಿದ್ದಾರೆ. ಇಂಥ ಪಟ್ಟಣದಲ್ಲಿ ಸ್ವಚ್ಛತೆ ಕೆಲಸ ಮಾಡುವ ನಮ್ಮನ್ನು ವಿಶೇಷ ಪ್ರಕರಣದ ಅಡಿಯಲ್ಲಿ ಕೆಲಸ ಕಾಯಂಗೊಳಿಸಬೇಕು ಎಂದು ಸುಮಾರು 20 ದಿನಗಳ ಕಾಲ ಧರಣಿ ಮಾಡಿದ ಸಂದರ್ಭದಲ್ಲಿ ಶಾಸಕರು ಹಾಗೂ ಅಧಿಕಾರಿಗಳು ಸಮಸ್ಯೆಯನ್ನು ಮೂರು ತಿಂಗಳ ಒಳಗೆ ಬಗೆಹರಿಸುವ ಆಶ್ವಾಸನೆ ನೀಡಿದ್ದರು. ಆದರೆ ಭರವಸೆ ಈಡೇರಿಲ್ಲ. ಈ ಬಾರಿ ನಾವು ಹಮ್ಮಿಕೊಳ್ಳುವ ಧರಣಿಯಿಂದ ಹಿಂದೆ ಸರಿಯುವುದಿಲ್ಲ. ಸಮಸ್ಯೆಗೆ ಕೂಡಲೇ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.