ಕೊಳ್ಳೇಗಾಲ: ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡುವಾಗ ಸುರಕ್ಷಿತ ಉಪಕರಣಗಳನ್ನು ಬಳಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮವಾಗುತ್ತದೆ ಎಂದು ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಸೂಚನೆ ನೀಡಿದರು.
ಪಟ್ಟಣದ ಉಪವಿಭಾಗಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉಪವಿಭಾಗ ಮಟ್ಟದ ಸಫಾಯಿ ಕರ್ಮಚಾರಿ ಉಸ್ತುವಾರಿ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆ ಹೆಲ್ತ್ ಇನ್ಸ್‌ಪೆಕ್ಟರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಬೇಕು. ಕರ್ತವ್ಯದಲ್ಲಿರುವಾಗ ಯಾರಾದರೂ ಸೇಫ್ಟಿ ಕಿಟ್ ಬಳಸದಿದ್ದರೆ ಅಂಥವರಿಗೆ ನೋಟಿಸ್ ನೀಡಿ ತಿಳಿ ಹೇಳಬೇಕು. ಒಂದು ವೇಳೆ ಅಧಿಕಾರಿಗಳೇ ನಿರ್ಲಕ್ಷ್ಯ ವಹಿಸಿ ನಿಯಮ ಉಲ್ಲಂಘನೆ ಆಗಿರುವುದು ಗಮನಕ್ಕೆ ಬಂದರೆ ಅಧಿಕಾರಿಗಳ ಮೇಲೆ ಕ್ರಮವಾಗುತ್ತದೆ ಎಂದರು. ಈ ವೇಳೆ ಕೊಳ್ಳೇಗಾಲ, ಯಳಂದೂರು, ಹನೂರಿನ ಅಧಿಕಾರಿಗಳಿಂದ ಸೇಫ್ಟಿ ಕಿಟ್ ಬಳಕೆಯ ಬಗ್ಗೆ ಮಾಹಿತಿ ಪಡೆದರು.
ಪೌರಕಾರ್ಮಿಕರಿಗೆ ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು. ಪಿಎಂಎಸ್‌ಬಿವೈ ಮತ್ತು ಪಿಎಂಜೆಜೆಬಿವೈ ವಿಮೆಗಳನ್ನು ಅಧಿಕಾರಿಗಳು ಪೌರಕಾರ್ಮಿಕರಿಗೆ ಮಾಡಿಸಿಕೊಡಬೇಕು. ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ಕಟ್ಟಿಸಿಕೊಡಬೇಕೆಂದರು. ಈ ವೇಳೆ ವಿಶ್ರಾಂತಿ ಗೃಹಗಳಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪೌರಕಾರ್ಮಿಕರಿಗೆ ನೀಡುವ ಸಂಬಳ ಹಾಗೂ ಗೌರವಧನ ವಿಳಂಬವಾಗದಂತೆ ಕ್ರಮವಹಿಸಿ ಎಂದರು.
ತಾಲೂಕು ಪಂಚಾಯಿತಿ ಇಒ ಗುರುಶಾಂತಪ್ಪ ಬೆಳ್ಳುಂಗಡಿ ಮಾತನಾಡಿ, ಉಪವಿಭಾಗ ಮಟ್ಟದಲ್ಲಿರುವ ವಿದ್ಯಾರ್ಥಿ ನಿಲಯಗಳಿಗೆ ಸ್ವಚ್ಛತೆ ಕಾರ್ಯ ಹೇಗೆ ನಡೆಯುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವ ಮೂರ್ತಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಕೇಶವಮೂರ್ತಿ ಪ್ರತಿಕ್ರಿಯಿಸಿ, ಎರಡ್ಮೂರು ದಿನಕ್ಕೊಮ್ಮೆ ಸ್ವಚ್ಛತೆ ನಡೆಯುತ್ತಿದೆ ಎಂದರು. ನಿತ್ಯವೂ ಸ್ವಚ್ಛತೆ ಆಗುವಂತೆ ಕ್ರಮವಹಿಸಬೇಕು. ಅಲ್ಲದೆ ಕೆಲಸ ಮಾಡುವ ಪೌರಕಾರ್ಮಿಕರಿಗೆ ಗೌರವಧನ ಅಥವಾ ಸಂಬಳ ಹೆಚ್ಚು ಮಾಡುವ ನಿಟ್ಟಿನಲ್ಲಿ ಕೆಲಸ ಆಗಬೇಕು ಎಂದು ಗುರುಶಾಂತಪ್ಪ ಬೆಳ್ಳುಂಗಡಿ ಹೇಳಿದರು.
ಗೈರಾದ ಚಾಮರಾಜನಗರ ನಗರಸಭೆ ಅಧಿಕಾರಿಗಳ ವಿರುದ್ಧ ಗರಂ :
ಸಭೆಯಲ್ಲಿ ಎಸಿ ಮಹೇಶ್ ಅವರು ಅನುಪಾಲನ ವರದಿ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಮಾಹಿತಿ ಪಡೆಯುವ ವೇಳೆ ಚಾಮರಾಜನಗರ ನಗರಸಭೆಯಿಂದ ಪೌರಾಯುಕ್ತರಾಗಲಿ ಅಥವಾ ಅವರ ಪರವಾಗಿ ಯಾವ ಅಧಿಕಾರಿ ಬಾರದಿರುವುದನ್ನು ಗಮನಿಸಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ ಅವರಿಗೆ ಚಾಮರಾಜನಗರದಿಂದ ಯಾವ ಅಧಿಕಾರಿಯು ಬಂದಿಲ್ಲ. ಸಭೆಗೆ ಬಾರದ ಬಗ್ಗೆ ಮಾಹಿತಿಯೂ ಇಲ್ಲ ಎಂದು ಗರಂ ಆದರು. ಆಗಾಗಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚನೆ ನೀಡಿದರು.