ಮುದ್ದೇಬಿಹಾಳದ ಪಲ್ಲವಿ ಬಾರ್ ಹಾಗೂ ರೆಸ್ಟೋರೆಂಟ್ ಮುಂದೆ ಪುರಸಭೆ ಸಿಬ್ಬಂದಿ ಬಾಕಿ ಟ್ಯಾಕ್ಸ್ ಪಾವತಿಸುವಂತೆ ಹಲಿಗೆ ಬಡಿದರು. 
ಜಿಲ್ಲೆ

ಬಾರ್ ಮುಂದೆ ಹಲಿಗೆ ಬಾರಿಸಿದ ಪೌರಕಾರ್ಮಿಕರು!

ಮುದ್ದೇಬಿಹಾಳ: ಸ್ಥಳೀಯ ಪುರಸಭೆಗೆ ಬರಬೇಕಿದ್ದ ಆಸ್ತಿ ಕರದ ಬಾಕಿ ಪಾವತಿಸುವಂತೆ ಬಾರ್‌ವೊಂದರ ಮುಂದೆ ಪುರಸಭೆ ಪೌರಕಾರ್ಮಿಕರು ಹಲಿಗೆ ಬಾರಿಸಿ ಬಾಕಿ ಕರ ಕಟ್ಟುವಂತೆ ವಿನೂತನ ರೀತಿಯಲ್ಲಿ ಸೋಮವಾರ ಒತ್ತಡ ಹಾಕಿದರು.

ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ವಾರ್ಡ್ ಸಂಖ್ಯೆ 7ರಲ್ಲಿ ಬರುವ ಆಸ್ತಿ ಸಂಖ್ಯೆ 1968ರ ಎಸ್.ಎಸ್.ಕರಭಂಟನಾಳ ಅವರಿಗೆ ಸೇರಿದ ಪಲ್ಲವಿ ಬಾರ್ ಹಾಗೂ ರೆಸ್ಟೋರೆಂಟ್‌ನ ಕಟ್ಟಡದ ಎದುರಿಗೆ ಪುರಸಭೆ ಕಂದಾಯ ವಿಭಾಗದ ಅಧಿಕಾರಿಗಳು, ಪೌರಕಾರ್ಮಿಕರು ಹಲಿಗೆ ಬಡಿದರು.

ತಕ್ಷಣ ಸ್ಥಳಕ್ಕೆ ಆಗಮಿಸಿದ ಆಸ್ತಿಯ ಮಾಲೀಕ ಸಂಗಮೇಶ ಕರಭಂಟನಾಳ ಪುರಸಭೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರಲ್ಲದೆ ನಾವು ಟ್ಯಾಕ್ಸ್ ಕಟ್ಟಬೇಕು ನಿಜ. ನಮ್ಮ ಕಟ್ಟಡದ ಎದುರಿಗೆ ಹಲಿಗೆ ಬಡಿಯುವಂತೆ ಆದೇಶ ಏನಾದರೂ ಇದೆಯೇ ? ಇದ್ದರೆ ತಂದು ಹಲಿಗೆ ಬಡಿಯಿರಿ ಎಂದು ಅಧಿಕಾರಿಗಳೊಂದಿಗೆ ಜಟಾಪಟಿ ನಡೆಸಿದರು.

ಪುರಸಭೆ ಕಂದಾಯ ಅಧಿಕಾರಿ ಎನ್.ಎಸ್.ಪಾಟೀಲ, ಕಂದಾಯ ನಿರೀಕ್ಷಕ ಸಂತೋಷ ಮಠ ಮಾತನಾಡಿ, ಈಗಾಗಲೇ ಆಸ್ತಿ ತೆರಿಗೆ ಬಾಕಿ ಕಟ್ಟಲು ತಮಗೆ ತಿಳಿಸಲಾಗಿದೆ. ಬಾಕಿ ಇರಿಸಿಕೊಂಡಿದ್ದಕ್ಕೆ ನಾವು ಹಲಿಗೆ ಬಡಿಯಲು ಹಚ್ಚಿದ್ದು. ನೀವು ಬಾಕಿ ಸರ್ಕಾರಕ್ಕೆ ತುಂಬಿ ಎಂದು ಹೇಳಿದರು.

ಬಿಲ್ ಕಲೆಕ್ಟರ್ ಶರಣು ಚಲವಾದಿ, ಶಮ್ಸುದ್ದೀನ್ ಮೂಲಿಮನಿ, ಉಮೇಶ ದೇವರ, ಆರೋಗ್ಯ ನಿರೀಕ್ಷಕರಾದ ಜಾವೇದ ನಾಯ್ಕೋಡಿ, ಮಹಾಂತೇಶ ಕಟ್ಟಿಮನಿ ಇತರರಿದ್ದರು. ಮಧ್ಯಾಹ್ನದವರೆಗೂ ಹಲಿಗೆ ಬಡಿಯುವ ಕಾರ್ಯವನ್ನು ಪುರಸಭೆ ಪೌರಕಾರ್ಮಿಕರು ಮಾಡಿದರು.

ಸನ್ 2005-06 ರಿಂದ 2023-24ರವರೆಗೆ ಆಸ್ತಿ ಕರವನ್ನು ತುಂಬಿಲ್ಲ. 36,98,108 ರೂ.ಬಾಕಿ ಕಟ್ಟಬೇಕಾಗಿದೆ. ಸಾಕಷ್ಟು ಬಾರಿ ತಿಳಿ ಹೇಳಿದ್ದರೂ ಅವರು ಆಸ್ತಿಕರ ತುಂಬಿಲ್ಲ. ಏಳು ದಿನಗಳಲ್ಲಿ ಬಾಕಿ ತುಂಬದಿದ್ದಲ್ಲಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು.
ಮೋಹನ್ ಜಾಧವ, ಪುರಸಭೆ ಮುಖ್ಯಾಧಿಕಾರಿ