ಹುಣಸೂರು: ನಗರವನ್ನು ಸ್ವಚ್ಛವಾಗಿಡುವ ಮೂಲಕ ನಾಗರಿಕರಿಗೆ ಆರೋಗ್ಯ ಕಾಪಾಡುತ್ತಿರುವ ಪೌರಕಾರ್ಮಿಕರು ನಮ್ಮೆಲ್ಲರ ಹಸಿರು ಸೈನಿಕರು ಎಂದು ಪೌರಾಯುಕ್ತೆ ಎಂ.ಮಾನಸಾ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್‌ಭವನದಲ್ಲಿ ಬುಧವಾರ ನಗರಸಭೆ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿ ನಮ್ಮೆಲ್ಲರಿಗೂ ಆರೋಗ್ಯಭಾಗ್ಯ ನೀಡಿರುವ ಪೌರಕಾರ್ಮಿಕರನ್ನು ಸಮಾಜ ಗೌರವಯುತವಾಗಿ ನಡೆಸಿಕೊಳ್ಳಬೇಕು. ಪೌರಕಾರ್ಮಿಕರು ಮತ್ತವರ ಕುಟುಂಬ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದಕ್ಕಾಗಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು. ಅಲ್ಲದೆ ಸರ್ಕಾರ ಪೌರಕಾರ್ಮಿಕರಿಗಾಗಿ ರೂಪಿಸಿರುವ ವಿಶೇಷ ಯೋಜನೆಗಳನ್ನು ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದರು.
ಉತ್ತಮ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಮಾಲಿಕ್‌ಪಾಷ, ಸ್ವಚ್ಛತಾ ರಾಯಭಾರಿಗಳಾಗಿರುವ ಇವರು ನಮ್ಮೆಲ್ಲರ ಹೆಮ್ಮೆ ಎಂದರು.
ಶಿಕ್ಷಕಿ, ಸಂಪನ್ಮೂಲ ವ್ಯಕ್ತಿ ಮಂಜುಳಾ ಮಾತನಾಡಿ, ಪೌರಕಾರ್ಮಿಕರು ಸಮುದಾಯಕ್ಕೆ ಅನಿವಾರ್ಯ. ಇವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಆದ್ಯತೆ ನೀಡಬೇಕು ಎಂದರು.
ನಗರಸಭೆ ಸದಸ್ಯೆ ರಾಣಿಪೆರುಮಾಳ್ ಮಾತನಾಡಿ, ಪೌರಕಾರ್ಮಿಕರನ್ನು ಸಮಾಜದ ಕಟ್ಟಕಡೆಯ ವ್ಯಕ್ತಿ ಎಂದೇ ಪರಿಗಣಿಸಲಾಗುತ್ತಿದೆ. ಪೌರಕಾರ್ಮಿಕರನ್ನು ಮೊದಲ ಪ್ರಜೆ ಎಂದೇ ಗೌರವಿಸಬೇಕು. ಕಾಯಂನೌಕರರನ್ನಾಗಿಯೇ ನೇಮಿಸಿಕೊಳ್ಳಬೇಕು. ನಗರದಲ್ಲಿ ಪೌರಕಾರ್ಮಿಕರು ಹಳೇ ಬಡಾವಣೆಯಲ್ಲೇ ವಾಸಿಸುತ್ತಿದ್ದು, 50 ವರ್ಷಗಳಿಂದಲೂ ನಿವೇಶನ ನೀಡಿಲ್ಲ ಎಂದರು.
ಪೌರಕಾರ್ಮಿಕರ ಸಂಘದ ಅಧ್ಯಕ್ಷ ರಾಚಪ್ಪ ಮಾತನಾಡಿ, ಪೌರಕಾರ್ಮಿಕರ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ನಿವೇಶನ, ಮನೆ ನಿರ್ಮಾಣಕ್ಕೆ 96 ಲಕ್ಷ ರೂ. ಮೀಸಲಿಟ್ಟು ನಾಲ್ಕು ವರ್ಷಗಳಾದರೂ ಯಾವುದೇ ಕ್ರಮವಹಿಸಿಲ್ಲ. ಇನ್ನಾದರೂ ಭರವಸೆ ಬಿಟ್ಟು ಕಾರ್ಯೊನ್ಮುಖರಾಗಿ ಎಂದು ಮನವಿ ಮಾಡಿದರು.
ನಗರಸಭೆ ಮಾಜಿ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ಸದಸ್ಯರಾದ ದೇವರಾಜ್, ಸತೀಶ್‌ಕುಮಾರ್, ಸಂಘದ ಮಾಜಿ ಅಧ್ಯಕ್ಷ ರಾಮು ಮಾನಾಡಿದರು. ನಗರಸಭೆ ಸದಸ್ಯರು, ಎಇಇಗಳಾದ ಶರ್ಮಿಳಾ, ಸೌಮ್ಯಾ ಇತರರಿದ್ದರು. ಅರ್ಜುನ್ ನಿರ್ದೇಶನದ ಹಸಿರು ಸೈನಿಕರು ಎಂಬ ಸಾಕ್ಷ್ಯ ಚಿತ್ರವನ್ನು ಇದೇ ವೇಳೆ ಪ್ರದರ್ಶಿಸಲಾಯಿತು. ಮಾಗಳಿ, ಭರತ್, ರಾಮು, ರಾಜು, ಜ್ಯೋತಿ ಅವರನ್ನು ಉತ್ತಮ ಪೌರಕಾರ್ಮಿಕರೆಂದು ಗುರುತಿಸಿ ಗೌರವಿಸಲಾಯಿತು. ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.