ಜಿಲ್ಲೆ

ನಗರದ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಕೊಡುಗೆ ಅಮೂಲ್ಯ

ಪ್ರಶಾಂತ ಜಿ. ಭಾಗ್ವತ

ಶಾಸಕ ಯಶ್​ಪಾಲ್​ ಸುವರ್ಣ ಮೆಚ್ಚುಗೆ

ಪೌರಕಾರ್ಮಿಕರ ದಿನಾಚರಣೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸ್ವಚ್ಛತೆಯ ವಿಚಾರದಲ್ಲಿ ಉಡುಪಿಯು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇದಕ್ಕೆ ಜಿಲ್ಲೆಯ ಪೌರಕಾರ್ಮಿಕರ ಶ್ರಮವೇ ಕಾರಣ. ತಮ್ಮ ಕರ್ತವ್ಯ, ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಕೈಗೊಳ್ಳುತ್ತಿರುವ ಅವರು, ನಗರದ ಸ್ವಚ್ಛತಾ ಕಾರ್ಯದಲ್ಲಿ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. ಪೌರಕಾರ್ಮಿಕರು ಉಡುಪಿಯ ಆಸ್ತಿ ಎಂದು ಶಾಸಕ ಯಶ್​ಪಾಲ್​ ಸುವರ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಉಡುಪಿಯ ಪುರಭವನದಲ್ಲಿ ನಗರಸಭೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವಚ್ಛತಾ ಸಾಧನ ಬಳಸಿಯೇ ಕೆಲಸ ಮಾಡಿ

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ನಗರದ ಸ್ವಚ್ಛತೆಯಲ್ಲಿ ತೊಡಗಿಕೊಳ್ಳುವ ಪೌರಕಾರ್ಮಿಕರ ಆರೋಗ್ಯವೂ ಸಹ ಉತ್ತಮವಾಗಿರಬೇಕೆಂಬ ಉದ್ದೇಶದಿಂದ ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಆಯೋಜಿಸುತ್ತಿದೆ. ತಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಕೈಗವಸು ಸೇರಿದಂತೆ ಸ್ವಚ್ಛತಾ ಸಾಧನ ಬಳಸಿಯೇ ಕೆಲಸ ಮಾಡಬೇಕು. ಯಾವುದೇ ಸೌಲಭ್ಯ ಬೇಕಿದ್ದಲ್ಲಿ ಕೇಳಿ ಪಡೆದುಕೊಳ್ಳುವ ಹಕ್ಕು ತಮಗಿದೆ. ತಮ್ಮ ಮಕ್ಕಳಿಗೂ ಸಹ ಉನ್ನತ ಶಿಕ್ಷಣ ಕಲಿಯಲು ತಾವುಗಳು ಅವಕಾಶ ಮಾಡಿಕೊಡಬೇಕು ಎಂದರು.

ನಗರಸಭೆಯ ಅಧ್ಯಕ್ಷ ಪ್ರಭಾಕರ್​ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಕೆ.ಪ್ರಭಾಕರ್​, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್​, ಉಡುಪಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್​ ಜೆ. ಕಲ್ಮಾಡಿ, ನಗರಸಭೆಯ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಆರ್​. ನಾಯಕ್​, ನಗರಸಭಾ ಸದಸ್ಯರು, ಪೌರಕಾರ್ಮಿಕರು ಉಪಸ್ಥಿತರಿದ್ದರು.

ನಗರಸಭೆಯ ಪೌರಾಯುಕ್ತ ಡಾ. ಉದಯ್​ ಶೆಟ್ಟಿ ಸ್ವಾಗತಿಸಿದರು. ನಗರಸಭೆಯ ಪರಿಸರ ಇಂಜಿನಿಯರ್​ ಸ್ನೇಹಾ ಕೆ.ಎಸ್​. ವಂದಿಸಿದರು. ಪ್ರಶಾಂತ್​ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಸನ್ಮಾನ

ಉತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ಸಂವಿಧಾನ ದಿನದ ನಿಮಿತ್ತ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಬಳಿಕ ಪೌಕಾರ್ಮಿಕರಿಗೆ ಇತ್ತೀಚೆಗೆ ಆಯೋಜಿಸಿದ್ದ ವಿವಿಧ ಸ್ಫರ್ಧೆ, ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಉಡುಪಿ ನಗರಸಭಾ ಕಚೇರಿಯಿಂದ ಪುರಭವನದವರೆಗೆ ಪೌರ ಕಾರ್ಮಿಕರು ಮೆರವಣಿಗೆ ನಡೆಸಿದರು.

ಉಡುಪಿ ನಗರಸಭೆಯು ಇತರ ಸ್ಥಳಿಯಾಡಳಿತಗಳಿಗೆ ಮಾದರಿಯಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಎಲ್ಲ ಪೌರಕಾರ್ಮಿಕರು ಪ್ರಾಮಾಣಿಕ ಸೇವೆಯ ಮೂಲಕ ಜಿಲ್ಲೆಯ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ಅವರಿಗೆ ಅಗತ್ಯ ಸವಲತ್ತು ತಲುಪಿಸಲು ಗರಿಷ್ಠ ಮಟ್ಟದಲ್ಲಿ ನಗರಸಭೆಯಿಂದ ಸಹಕಾರ ನೀಡಲಾಗುತ್ತಿದ್ದು, ಮುಂದೆಯೂ ಸಹಕಾರ ನೀಡಲಾಗುವುದು. | ಯಶ್​ಪಾಲ್​ ಸುವರ್ಣ. ಶಾಸಕ, ಉಡುಪಿ