ಜಿಲ್ಲೆ

ಪ್ರತಿ ಕ್ಷೇತ್ರದಲ್ಲೂ ಮಹಿಳೆಯ ಬಲಿಷ್ಠ ಬೆಳವಣಿಗೆ

ಚನ್ನಗಿರಿ: ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಅವರಿಗೆ ಸಮಾನವಾಗಿ ಸವಾಲನ್ನು ನೀಡುವ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದ್ದಾಳೆ ಎಂದು ಜೆಎಂಎಫ್​ಸಿ ನ್ಯಾಯಾಲಯದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶಮಾ ಶ್ರೀವತ್ಸ ತಿಳಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಲು ಶಿಕ್ಷಣ ಅತ್ಯಗತ್ಯ. ಶಿಕ್ಷಣವನ್ನು ಪಡೆಯದೆ ಸಬಲೀಕರಣ ಕಾಣಲು ಸಾಧ್ಯವಿಲ್ಲ. ಜ್ಞಾನ ಯಾವ ದಿಸೆಯಲ್ಲಿ ದೊರೆತರು ಅದನ್ನು ಪಡೆದುಕೊಳ್ಳುವ ತಿಳವಳಿಕೆ ನಮ್ಮಲ್ಲಿರಬೇಕು. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಸರಿಯಾದ ಸಂಸ್ಕಾರವನ್ನು ಪಾಲಕರು ನೀಡಿದ್ದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬಹುದಾಗಿದೆ. ನಾಲ್ಕು ಗೋಡೆಗಳ ನಡುವೆ ಇದ್ದಂತಹ ಮಹಿಳೆ ಇಂದು ಸ್ವಂತಿಕೆಯಿಂದ ಪ್ರತಿ ಕ್ಷೇತ್ರಗಳಲ್ಲಿ ಸಮಾನಳಾಗಿ ನಿಂತಿದ್ದಾಳೆ. ಜತೆಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾಳೆ ಎಂದರು.

ಪಾಲಕರು ಗಂಡು- ಹೆಣ್ಣು ಎನ್ನುವ ಭೇದ ಮಾಡದೆ ಗಂಡು ಮಗುವಿಗೆ ನೀಡುವಷ್ಟು ಶಿಕ್ಷಣವನ್ನು ಹೆಣ್ಣಿಗೂ ಕಲ್ಪಿಸಬೇಕು. ಮಹಿಳಾ ಸಶಕ್ತೀಕರಣ ಮತ್ತು ಸಬಲೀಕರಣಕ್ಕೆ ಶಿಕ್ಷಣವೇ ಮೂಲ ಆಧಾರ ಎಂದು ತಿಳಿಸಿದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ. ರಾಜಪ್ಪ ಮಾತನಾಡಿ, ಮಹಿಳೆಯರನ್ನು ಎಲ್ಲರ ಗೌರವದಿಂದ ಕಾಣಬೇಕು. ವೇದಿಕೆಗಳಲ್ಲಿ ಮಹಿಳಾ ಸ್ವಾತಂತ್ರ್ಯ ಬಗ್ಗೆ ಮಾತನಾಡುವ ಮನೆಗಳಲ್ಲಿ ಮಹಿಳೆಯರನ್ನು ಹೊರಗೆ ಕಳುಹಿಸದೆ ಇರುವ ಅನೇಕ ಪ್ರಸಂಗಗಳನ್ನು ಕಂಡಿದ್ದೇವೆ ಎಂದು ಹೇಳಿದರು.

ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಲು ಸರ್ಕಾರ ಶೇ.33 ರಷ್ಟು ಮೀಸಲಾತಿಯನ್ನು ನೀಡಿದೆ. ಇದರ ಪ್ರಯೋಜನವನ್ನು ಪಡೆಯಬೇಕು. ಹೆಣ್ಣು ಮಗಳಾಗಿ. ಹೆಂಡತಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ಪ್ರತಿ ಹಂತದಲ್ಲಿ ಕುಟುಂಬದ ನಿರ್ವಹಣೆಯನ್ನು ಮಾಡುತ್ತಾಳೆ. ಹೆಣ್ಣು ಇಲ್ಲದ ಮನೆಯಲ್ಲಿ ಸಂಸ್ಕಾರವಂತ ಮಕ್ಕಳು ಇರಲಾರರು ಎಂದರು.

ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜಿ. ಮಹಾಲಕ್ಷ್ಮೀ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಬಿ.ಕೆ. ಉತ್ತಮ್ ಗ್ರೇಡ್2 ತಹಸೀಲ್ದಾರ್ ರುಕ್ಮಿಣಿಬಾಯಿ, ವಕೀಲರ ಸಂಘದ ಉಪಾಧ್ಯಕ್ಷ ಬಾಬುಜಾನ್, ಕಾರ್ಯದರ್ಶಿ ಎಂ.ಎಸ್. ಜಗದೀಶ್, ಖಜಾಂಚಿ ವಿ.ಎ. ಮಲ್ಲಿಕಾರ್ಜುನ್, ಕೆ.ಎಸ್. ಪ್ರತಿಭಾ, ಎನ್.ಆರ್. ಪಟೇಲ್ ಇದ್ದರು.