ಜಿಲ್ಲೆ

ಸರ್ಕಾರವೇ ಸಂಬಳ ನೀಡಲು ಆಗ್ರಹ: ಪೌರ ನೌಕರರ ಸಂಘದಿಂದ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಗುತ್ತಿಗೆ ಕಾರ್ಮಿಕರನ್ನು ಗ್ರಾಮ ಪಂಚಾಯಿತಿ ನೌಕರಂತೆ ಪರಿಗಣಿಸುವುದರ ಜತೆಗೆ ರಾಜ್ಯ ಸರ್ಕಾರವೇ ಸಂಬಳ ನೀಡಬೇಕು ಎಂದು ಆಗ್ರಹಿಸಿ ಪೌರ ನೌಕರರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರಸಭೆ ಕಚೇರಿ ಎದುರು ಜಮಾಯಿಸಿದ ನೌಕರರು, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಕಳೆದ ಮಾ.23ರಂದು ಚಿತ್ರದುರ್ಗದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯ ತೀರ್ಮಾನದಂತೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಮಾ. 27ರಂದು ಪೌರಾಡಳಿತ ಸಚಿವ ರಹೀಮ್ ಖಾನ್ ಅವರ ನಿವಾಸದ ಎದುರು ಶಾಂತಿಯುತ ಪ್ರತಿಭಟನೆ ನಡೆಸಲಾಗಿತ್ತು. ಅಂದು ಸಚಿವರು ದೂರವಾಣಿ ಮೂಲಕ ನಮ್ಮೆಲ್ಲರನ್ನು ಉದ್ದೇಶಿಸಿ ಮಾತನಾಡಿ, ರಂಜಾನ್ ಹಬ್ಬದ ನಂತರ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ, ರಾಜ್ಯ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಲು ದಿನಾಂದ ನಿಗದಿಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ನಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಇಲ್ಲಿಯವರೆಗೂ ಚರ್ಚಿಸಲು ಆಹ್ವಾನಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೌರ ಸೇವಾ ಕಾರ್ಮಿಕರಿಗೆ ಸಂಜೀವಿನಿ ಯೋಜನೆ ಜಾರಿಗೆ ತರಬೇಕು. ನಗದು ರಹಿತ ಚಿಕಿತ್ಸೆ ನೀಡಬೇಕು. ಕೋವಿಡ್ ಸಂದರ್ಭದಲ್ಲಿಯೂ ನಾವು ಕೆಲಸ ಮಾಡಿದ್ದೇವೆ. ಅದೆಲ್ಲವನ್ನೂ ಪರಿಗಣಿಸಿ ನಮ್ಮ ಸೇವೆಗಳನ್ನು ಪರಿಗಣಿಸಿ ನಮ್ಮ ಬೇಡಿಕೆ ಈಡೇರಿಸಬೇಕು. ಕೆಲವು ಮುನ್ಸಿಪಾಲಿಟಿಗಳು ಆರ್ಥಿಕ ಸಬಲರಾಗಿಲ್ಲದ ಕಾರಣ ಅವರು ಸಂಬಳ ಕೊಡುವುದಾದರೂ ಹೇಗೆ?. ಅದೆಲ್ಲವನ್ನು ಗಮನಿಸಿ ಸರ್ಕಾರ ಸಮಸ್ಯೆ ಬಗೆಹರಿಸಬೇಕು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ. ಏ.28ರಂದು ರಾಜ್ಯಾದ್ಯಂತ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಜಿನ ಮೆರವಣಿಗೆ ನಡೆಸಲಿದ್ದೇವೆ. ಮೇ 9ರಂದು ತಮಟೆ ಚಳವಳಿ ಮಾಡಲಾಗುವುದು. ಮೇ 20 ರಿಂದ 23ರವರೆಗೆ ಸ್ಥಳೀಯ ಸಂಸ್ಥೆಗಳ ಹಂತದಲ್ಲಿ ಸಾರ್ವಜನಿಕ ಗಮನ ಸೆಳೆಯಲು ವಿವಿಧ ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಆರ್.ನಾಗರಾಜು, ಕಲ್ಪನಾ, ರವಿಕುಮಾರ್, ರಾಜೇಗೌಡ, ಮಂಜುನಾಥ್, ಮಾದಯ್ಯ, ಚಂದ್ರು, ನಿಂಗರಾಜು, ಮಂಜು, ನಂಜುಂಡಪ್ಪ ಇತರರಿದ್ದರು.