ಜಿಲ್ಲೆ

ಸಿವಿಲ್ ಗುತ್ತಿಗೆದಾರರ ಸಂಘದಲ್ಲಿ ಒಡಕು

Uttara Kannada - Subash Hegde

ಕಾರವಾರ: ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದಲ್ಲಿ ಒಡಕು ಕಾಣಿಸಿಕೊಂಡಿದೆ. ಶಾಸಕ ಸತೀಶ ಸೈಲ್ ಆಪ್ತರ ನಡುವೆಯೇ ಕುಸ್ತಿ ನಡೆದಿದೆ.
ಆಗಸ್ಟ್ 7 ರಂದು ಖಾಸಗಿ ಹೋಟೆಲ್‌ನಲ್ಲಿ ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಸರ್ವ ಸಾಧಾರಣ ಸಭೆ ನಡೆದು, ಮಾಧವ ನಾಯ್ಕ ಅವರು ಸತತ ಮೂರನೇ ಅವಽಗೆ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅನಿಲ ಮಾಳ್ಸೇಕರ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಆದರೆ, ಮಾಧವ ನಾಯ್ಕ ಆಯ್ಕೆ ಕಾನೂನು ಬಾಹಿರವಾಗಿದ್ದು, ಚುನಾವಣೆಯನ್ನು ರದ್ದು ಮಾಡಬೇಕು ಎಂದು ಶಾಸಕ ಸತೀಶ ಸೈಲ್ ಆಪ್ತ, ಚಿತ್ತಾಕುಲಾ ಗ್ರಾಪಂ ಸದಸ್ಯ ವಿಜಯ ದೇಸಾಯಿ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದ್ದಾರೆ. ಸಂಘ, ಸಂಸ್ಥೆಗಳ ಕಾಯ್ದೆಯಂತೆ ನೂತನ ಅಧ್ಯಕ್ಷರ ಆಯ್ಕೆಯ ಮೊದಲು ಎಲ್ಲ ಸದಸ್ಯರಿಗೆ ನೋಟಿಸ್ ನೀಡಬೇಕಿದೆ. ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿ ನಂತರ ಸಮಿತಿ ಸದಸ್ಯರ ಹಾಗೂ ಅಧ್ಯಕ್ಷರ ಆಯ್ಕೆಯನ್ನು ನೇಮಕವಾದ ಚುನಾವಣಾಧಿಕಾರಿಗಳ ಮುಂದೆ ಮಾಡಬೇಕಿದೆ. ಆದರೆ, ನಿಯಮವನ್ನು ಪಾಲಿಸಿಲ್ಲ.
ಇದರಿಂದ ಅಧ್ಯಕ್ಷ, ಪದಾಽಕಾರಿಗಳ ಆಯ್ಕೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ದೂರು ಪತ್ರವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗುತ್ತಿಗೆದಾರರ ಸಂಘದ ಪದಾಧಿಕಾರಿ ಸಮೀರ ನಾಯ್ಕ ಈ ಸಂಬಂಧ ದೂರು ನೀಡಿದ್ದಾರೆ. ಚುನಾವಣೆ ರದ್ದುಪಡಿಸದೇ ಹೋದರೆ, ಪ್ರತ್ಯೇಕ ಸಂಘವನ್ನು ಕಟ್ಟಲಾಗುವುದು ಎಂದು ವಿಜಯ ದೇಸಾಯಿ, ಸಮೀರ ನಾಯ್ಕ ಮತ್ತು ತಂಡ ಎಚ್ಚರಿಸಿರುವುದಾಗಿ ತಿಳಿದು ಬಂದಿದೆ.
ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ಸಹ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದು, ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪರ ಪ್ರಚಾರ ಕಾರ್ಯ ಕೈಗೊಂಡಿದ್ದರು. ಈಗ ಪಕ್ಷದಲ್ಲೇ ಒಡಕು ಕಾಣಿಸಿಕೊಂಡಿದೆ. ಶಾಸಕ ಸೈಲ್ ಯಾರ ಪರ ನಿಲ್ಲುತ್ತಾರೆ ಎಂಬ ಕುತೂಹಲ ಮೂಡಿದೆ.