ವಿಜಯವಾಣಿ ಸುದ್ದಿಜಾಲ ಉಡುಪಿ
ಶಾಂತಿ, ಸುವ್ಯವಸ್ಥೆ ಕಾಣದ ಸಮಾಜ ಬೆಳವಣಿಗೆ ಹೊಂದಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪೊಲೀಸರ ಪಾತ್ರ ಅತಿ ಮುಖ್ಯವಾಗುತ್ತದೆ. ಸಾರ್ವಜನಿಕರು ಮತ್ತು ಪೊಲೀಸರ ನಡುವಿನ ಅಂತರ ಕಡಿಮೆ ಆಗುವಲ್ಲಿ ಸಮುದಾಯ ಪೊಲೀಸಿಂಗ್ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಿಐಡಿ ಡಿಜಿಪಿ ಎಂ.ಎ. ಸಲೀಂ ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲೆಯ 2000ನೇ ಬ್ಯಾಚ್ನ ಸಿವಿಲ್ ಮತ್ತು ಡಿಎಆರ್ ಸಿಬ್ಬಂದಿ ಪೊಲೀಸ್ ಇಲಾಖೆಯಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಯುನೈಟೆಡ್ ಬಾಸೆಲ್ ಮಿಷನ್ ಜುಬ್ಲಿ ಚರ್ಚ್ ಹಾಲ್ನಲ್ಲಿ ಶನಿವಾರ ಆಯೋಜಿಸಿದ್ದ ರಜತ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಪೊಲೀಸ್ ಇಲಾಖೆಯ ಕೆಲಸ ಅತ್ಯಂತ ಕಠಿಣ ಹಾಗೂ ಸವಾಲಿನಿಂದ ಕೂಡಿದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ಹಿಡಿದು ಉನ್ನತ ಅಧಿಕಾರಿ ವರೆಗೂ ಸಾಮಾಜಿಕ ಜವಾಬ್ದಾರಿ ಮುಖ್ಯವಾಗಿರುತ್ತದೆ. ತಾವುಗಳೆಲ್ಲ ಇನ್ನೂ ಹೆಚ್ಚಿನ ರೀತಿಯಲ್ಲಿ ಜನರ ವಿಶ್ವಾಸಗಳಿಸುವ ಕಾರ್ಯ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿಜಿಪಿ ಎಂ.ಎ. ಸಲೀಂ ಹಾಗೂ 2000ನೇ ಬ್ಯಾಚ್ನ ಸಿವಿಲ್ ಮತ್ತು ಡಿಎಆರ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಿಬ್ಬಂದಿ ಸನ್ಮಾನಿಸಲಾಯಿತು.
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಐಜಿಪಿ ಎಚ್.ಎಸ್. ರೇವಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣಕುಮಾರ್ ಕೆ., ಜಿಪಂ ಸಿಇಒ ಪ್ರತಿಕ್ ಬಾಯಲ್, ಜಿಲ್ಲಾ ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ದಯಾಮ, ಕರಾವಳಿ ಕಾವಲು ಪಡೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ನಿವೃತ್ತ ಎಸ್ಪಿ ಎಂ.ಕುಮಾರ್ ಉಪಸ್ಥಿತರಿದ್ದರು.
ಮಕ್ಕಳ ಸಹಾಯವಾಣಿ, ಮಹಿಳೆಯರ ಸಹಾಯವಾಣಿಯನ್ನು ಪ್ರಥಮ ಬಾರಿಗೆ ಉಡುಪಿಯಲ್ಲಿ ಆರಂಭಿಸಿ ಅದು ಯಶಸ್ವಿಯಾದ ಬಳಿಕ ಇತರೆಡೆಗಳಲ್ಲಿ ಸ್ಥಾಪಿಸಲಾಗಿದೆ. ಸಹಾಯವಾಣಿಗೆ ಉಡುಪಿಯೇ ಬುನಾದಿಯಾಗಿದೆ. ಪೊಲೀಸರು ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸಬೇಕು. | ಎಂ.ಎ. ಸಲೀಂ. ಸಿಐಡಿ ಡಿಜಿಪಿ