ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಇತ್ತೀಚೆಗೆ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಮ್ಯಾನ್ ಹೋಲ್ ದುರಂತದಲ್ಲಿ ಮೃತಪಟ್ಟ ಇಬ್ಬರು ಪೌರಕಾರ್ಮಿಕರ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ತಲಾ 10 ಲಕ್ಷ ರೂ. ಪಾವತಿಸಿದ್ದು, ನಿಯಮಾವಳಿಯಂತೆ ಸಾವಿಗಿಡಾದ ಪೌರಕಾರ್ಮಿಕರ ಕುಟುಂಬಗಳಿಗೆ ತಲಾ 30 ಲಕ್ಷ ರೂ. ಗಳನ್ನು ಪಾವತಿಸಲು ತಾಕೀತು ಮಾಡಲಾಗಿದೆ ಎಂದು ಕೇಂದ್ರ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಡಾ. ಪಿ.ಪಿ.ವಾವ ತಿಳಿಸಿದರು.
ದೇವನಹಳ್ಳಿ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪೌರ ಕಾರ್ಮಿಕರ ಸಭೆಯಲ್ಲಿ ಮಾತನಾಡಿದರು. ದಾಬಸ್‌ಪೇಟೆಯಲ್ಲಿ ನಡೆದಂತ ದುರಂಥ ದುರದೃಷ್ಟಕರಾಗಿದ್ದು, ಇಂಥ ಸನ್ನಿವೇಶಗಳು ಮತ್ತೆ ಯಾವತ್ತೂ ಮರುಕಳಿಸಬಾರದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು. ಯಾವುದೇ ಕಾರಣಕ್ಕೂ ಎಷ್ಟೇ ಒತ್ತಾಯಿಸಿದರೂ ಪೌರ ಕಾರ್ಮಿಕರು ಮ್ಯಾನ್‌ಹೋಲ್ಗಳ ಒಳಗೆ ಇಳಿಯಬಾರದು ಅದಕ್ಕಾಗಿಯೇ ಇರುವ ಸಕ್ಕಿಂಗ್ ಹಾಗೂ ಜಟ್ಟಿಂಗ್ ಯಂತ್ರಗಳನ್ನು ಬಳಸಬೇಕು ಹಾಗೂ ಇತ್ತೀಚಿಗೆ ನವೀನ ತಂತ್ರಜ್ಞಾನದ ರೋಬೋಟ್‌ಗಳು ಬಂದಿದ್ದು, ಅವುಗಳ ಸಹಾಯದಿಂದ ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಮಾಡಬಹುದಾಗಿದೆ ಎಂದರು. ಒಂದು ವೇಳೆ ಯಾರಾದರೂ ಮ್ಯಾನ್‌ಹೋಲ್‌ಗಳ ಸ್ವಚ್ಛತೆ ವಿಷಯದಲ್ಲಿ ಒಳಗೆ ಇಳಿಯುವಂತೆ ಒತ್ತಾಯಿಸಿದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಸಿಎಸ್‌ಆರ್ ನೆರವು ಪಡೆಯಿತು: ಮ್ಯಾನ್‌ಹೋಲ್ ಸ್ವಚ್ಛತೆ ಕುರಿತಂತೆ ಜಿಲ್ಲಾಡಳಿತ ಯಂತ್ರಗಳನ್ನು ಕಾಯ್ದಿರಿಸಿಕೊಂಡಿರಬೇಕು, ಒಂದು ವೇಳೆ ಯಂತ್ರಗಳ ಖರೀದಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಹಣಕಾಸಿನ ಕೊರತೆಯಿದ್ದರೆ ಸ್ಥಳೀಯ ಕಾರ್ಖಾನೆಗಳ ಸಿಎಸ್‌ಆರ್ ನಿಧಿಯ ನೆರವು ಪಡೆದು ವ್ಯವಸ್ಥೆ ಮಾಡಿಕೊಳ್ಳಬೇಕು ಯಂತ್ರ ಖರೀದಿಗೆ ಹಣವಿಲ್ಲ ಎಂಬ ಸಬೂಬು ಹೇಳಬಾರದು, ಇಂಥ ದುರಂತಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಪಿ.ವಿ.ವಾವ ತಿಳಿಸಿದರು. ಸಫಾಯಿ ಕರ್ಮಚಾರಿಗಳ ಗುರುತಿನ ಪತ್ರಗಳನ್ನು ವೀಕ್ಷಿಸಿದ ಅವರು ಗುರುತಿನ ಪತ್ರದಲ್ಲಿ ಕಾರ್ಮಿಕರ ಪಿಎ್ ಸಂಖ್ಯೆ, ಇಎಸ್‌ಐ ಸಂಖ್ಯೆ ಹಾಗೂ ಬ್ಲಡ್‌ಗ್ರೂಪ್ ಸೇರಿ ಅಗತ್ಯ ಮಾಹಿತಿ ಇರುವುದು ಕಡ್ಡಾಯ ಎಂದರು.
ಮಾಹಿತಿ ಪಡೆದರು: ಎಲ್ಲ ಕಾರ್ಮಿಕರಿಗೂ ಸಮವಸ್ತ್ರ, ಮಾಸ್ಕ್, ಆರೋಗ್ಯ ತಪಾಸಣೆ, ಶೂಗಳು, ಬೆಳಗಿನ ಉಪಾಹಾರ ನೀಡುವ ಬಗೆಗೆ ವಾವ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಖಚಿತಪಡಿಸಿಕೊಂಡರು ಹಾಗೂ ಕಾರ್ಮಿಕ ಕಾನೂನಿನ ಪ್ರಕಾರವಾಗಿ ಸಂಬಳ ಪಾವತಿಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದರು ಮತ್ತು ಅನುಕಂಪದ ಆಧಾರದಡಿ ಕುಟುಂಬಸ್ಥರಿಗೆ ಉದ್ಯೋಗ ನೀಡಿರುವ ಬಗೆ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಿದರು.
ಈ ವೇಳೆ ಅಧಿಕಾರಿಗಳು ಪ್ರತಿಕ್ರಿಯಿಸಿ ಎಲ್ಲಾ ಪೌರಕಾರ್ಮಿಕರಿಗೂ 2 ಜತೆ ಸಮವಸ್ತ್ರ ವಿತರಿಸಿದ್ದು, ವಿಜಯಪುರ ಸಿಎಂಸಿಯಲ್ಲಿ 5 ಜತೆ ಸಮವಸ್ತ್ರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಹೊಸಕೋಟೆ ಸ್ಥಳೀಯ ಸಂಸ್ಥೆ ಅಧಿಕಾರಿ ಮಾಹಿತಿ ನೀಡಿ ಜಿ+2 ಮಾದರಿಯಲ್ಲಿ 32 ಮನೆ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲೇ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದರು.
ಗುಣಮಟ್ಟದ ಮನೆ ನೀಡಿ: ಎಲ್ಲ ಪೌರ ಕಾರ್ಮಿಕರಿಗೂ ಮನೆ ನೀಡಿ, ಪೌರಕಾರ್ಮಿಕರಿಗೆ ಮನೆ ನೀಡಿದರೆ ಅವರ ಕುಟುಂಬಕ್ಕೆ ಒಳ್ಳೆಯದಾಗುತ್ತದೆ, ಸರ್ಕಾರ ಸಾಕಷ್ಟು ಹಣ ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಆಶ್ರಯ ವಸತಿ ಯೋಜನೆಗಳನ್ನು ಬಳಸಿಕೊಂಡು ಉತ್ತಮ ಗುಣಮಟ್ಟದ ಮನೆಗಳನ್ನು ನೀಡಿ ಎಂದು ವಾವಾ ಅವರು ಅಧಿಕಾರಿಗಳಿಗೆ ಸೂಚಿಸಿದರು.