ಮೈಸೂರು: ದೇಶದಲ್ಲೇ 3ನೇ ಸ್ವಚ್ಛನಗರಿ ಎಂಬ ಕೀರ್ತಿಗೆ ಮೈಸೂರು ಪಾತ್ರವಾಗಲು ಶ್ರಮಿಸಿದ್ದ ನಗರಪಾಲಿಕೆ ಆಯುಕ್ತ ಶೇಖ್ ತನ್ವಿರ್ ಆಸೀಫ್ ಹಾಗೂ ಅಂತಾರಾಷ್ಟ್ರಿಯ ಬಾಸ್ಕೆಟ್‌ಬಾಲ್ ಪಂದ್ಯದಲ್ಲಿ ಭಾರತ ಪ್ರತಿನಿಧಿಸಲಿರುವ ಶ್ರಾವಣಿ ಶಿವಣ್ಣ ಅವರನ್ನು ಸನ್ಮಾನಿಸಲಾಯಿತು.
ನಗರ ಪಾಲಿಕೆಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ಜೆ.ಪಿ ನಗರದ ಎಚ್.ವಿ. ರಾಜೀವ್ ಸ್ನೇಹ ಬಳಗ, ಲಯನ್ಸ ಕ್ಲಬ್ ಜೆ.ಪಿ ನಗರ, ಅಭ್ಯುದಯ ಮಹಿಳಾ ಸಮಾಜ, ಅರಿವಿನ ಮನೆ ಮಹಿಳಾ ಬಳಗ, ವಿವಿಧ 16 ಸಂಘ ಸಂಸ್ಥೆಗಳಿಂದ ಸನ್ಮಾನಿನ ಸಮಾರಂಭ ಆಯೋಜಿಸಲಾಗಿತ್ತು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ನಗರವನ್ನು ಸ್ವಚ್ಛವಾಗಿರಿಸಲು ಪೌರಕಾರ್ಮಿಕರು ಮೂಲ ಕಾರಣಿಕರ್ತರು. ಅವರಿಗೆ ಸಕಾಲಿಕವಾಗಿ ಮಾರ್ಗದರ್ಶನ ಮಾಡಿ ಮುನ್ನಡೆಸುವ ಮೂಲಕ ನಗರವನ್ನು ಸ್ವಚ್ಛಗೊಳಿಸಲು ಪಾಲಿಕೆ ಆಯುಕ್ತ ಶೇಖ್ ತನ್ವಿರ್ ಆಸಿಫ್ ಹೆಚ್ಚು ಕಾರ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ದೃಷ್ಟಿಯಲ್ಲಿ ಅವರನ್ನು ಅಭಿನಂದಿಸುವುದು ಪ್ರತಿಯೊಬ್ಬರ ಕರ್ತವ್ಯ. ಮೈಸೂರು ಸ್ವಚ್ಛನಗರಿ ಹೆಗ್ಗಳಿಕೆಯಲ್ಲಿ ಈ ಹಿಂದೆ ಎರಡು ಬಾರಿ ಪ್ರಥಮ ಸ್ಥಾನ ಪಡೆದಿತ್ತು ಎಂದರು.
ಕೆಲವು ವರ್ಷಗಳಿಂದ ಹೆಗ್ಗಳಿಕೆಯ ಸ್ಥಾನದಲ್ಲಿ ಕುಸಿತ ಉಂಟಾಗಿ ಹಿಂದೆ ಉಳಿದಿತ್ತು. ಆದರೆ ಪ್ರಸ್ತುತ ವರ್ಷದಲ್ಲಿ ದೇಶದಲ್ಲಿ 3ನೇ ಸ್ವಚ್ಛನಗರ ಸ್ಥಾನಕ್ಕೆ ನಗರ ಭಾಜನವಾಗಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇವತ್ತು ಮೈಸೂರಿನ ಪ್ರತಿಭೆ, ಡಾ.ಪುಟ್ಟರಾಜ ಗವಾಯಿಗಳ ಕ್ರೀಡಾಂಗಣ ಕ್ರೀಡಾಪಟು ಶ್ರಾವಣಿ ಶಿವಣ್ಣ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿ ವಿಶ್ವ ಮಹಿಳಾ ಏಷ್ಯನ್ ಕಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾಗಿ, ಅಂತಾರಾಷ್ಟ್ರಿಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ಮೂಲಕ ವಿಶ್ವ ಮಟ್ಟದಲ್ಲಿ ಮೈಸೂರಿನ ಹಿರಿಮೆ ಹೆಚ್ಚಿದ್ದಾರೆ. ಇದರ ಫಲವಾಗಿ ಭಾರತದ ಮಹಿಳಾ ಬಾಸ್ಕೆಟ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರ ಸಾಧನೆ ಮತ್ತಷ್ಟು ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು.
ಸನ್ಮಾನ ಸ್ವಿಕರಿಸಿ ನಗರ ಪಾಲಿಕೆ ಆಯುಕ್ತ ಶೇಖ್ ತನ್ವಿರ್ ಆಸೀಫ್ ಮಾತನಾಡಿ, ಸ್ವಚ್ಛ ನಗರದ ಕೀರ್ತಿಗೆ ಪಾಲಿಕೆಯ ಪೌರಕಾರ್ಮಿಕ ಹಾಗೂ ಸಿಬ್ಬಂದಿಗಳ ಶ್ರಮವಿದೆ. ನಾಗರಿಕರು ಮನೆಗಳಲ್ಲಿ ಕಸವನ್ನು ಸರಿಯಾದ ರೀತಿಯಲ್ಲಿ ಸಂಗ್ರಹಣೆ ಮಾಡುವ ಕೆಲಸ ವಾಗಬೇಕಿದೆ. ಪೌರಕಾರ್ಮಿಕರು ಒಂದು ದಿನ ಸಂಗ್ರಹಣೆಗೆ ಬಾರದಿದ್ದರೆ ಸಿಕ್ಕ ಸಿಕ್ಕಲ್ಲಿ ಕಸ ಬಿಸಾಡುವ ಮನಸ್ಥಿತಿ ದೂರವಾಗಬೇಕಿದೆ ಎಂದು ಸಲಹೆ ನೀಡಿದರು.
ಮೈಸೂರು ಸಂಸ್ಕೃತಿಯು ತನ್ನದೇ ಆದ ಅತ್ಯಂತ ಶ್ರೀಮಂತ ಹಾಗೂ ಶ್ರೇಷ್ಠತೆಯನ್ನು ಕಾಪಾಡಿಕೊಂಡಿದೆ. ಮೈಸೂರು ಒಡೆಯರ ಮನೆತನದ ಆಡಳಿತ ಸುವ್ಯವಸ್ಥೆಯನ್ನು ನಾವು ಸಹ ಅಳವಡಿಸಿಕೊಂಡು ನಗರದ ಅಭಿವೃದ್ಧಿ ಮಾಡಬೇಕಿದ್ದು, ಪ್ರತಿಯೊಬ್ಬರ ಜವಾಬ್ದಾರಿ ಹೆಚ್ಚಿದೆ ಎಂದರು.
ಸಾರ್ವಜನಿಕರು ಪಾಲಿಕೆಗೆ ಸಹಕಾರ ನೀಡಬೇಕಿದ್ದು, ಕಸವನ್ನು ಮನೆಗಳಲ್ಲಿಯೇ, ಪ್ರತ್ಯೇಕಿಸಿ ಪೌರಕಾರ್ಮಿಕರಿಗೆ ನೀಡಬೇಕಾಗಿದೆ. ಇಲ್ಲವಾದಲ್ಲಿ ನಾವು ಯಾವುದೇ ಹೊಸ ತಂತ್ರಜ್ಞಾನ, ಯಾಂತ್ರಿಕರಣ, ಹೆಚ್ಚು ಕಾರ್ಮಿಕರನ್ನು ಅಳವಡಿಸಿಕೊಂಡರು ಪ್ರಯೋಜನವಿಲ್ಲದಂತಾಗಿದೆ ಎಂದು ಬೇಸರಿಸಿದರು.
ಪೌರ ಕಾರ್ಮಿಕರಿಗೆ ಹೆಚ್ಚಿನ ಒತ್ತಡದ ಕೆಲಸ ನೀಡದಂತಾಗಬೇಕು. ಈ ನಿಟ್ಟಿನಲ್ಲಿ ಹಲವು ಸಂಘ ಸಂಸ್ಥೆಗಳ ಸಹಕಾರದಿಂದ ನಗರಪಾಲಿಕೆ ಕಾರ್ಯ ವೈಖರಿಯಿಂದ 3ನೇ ಸ್ಥಾನಕ್ಕೆ ಏರಿದ್ದು, ಅದಕ್ಕೂ ಮುಂದುವರೆಯುವ ಕೆಲಸವಾಗಬೇಕಿದೆ. ಇದಕ್ಕಾಗಿ ಸಾಕಷ್ಟು ಜಾಗೃತಿ, ಜವಾಬ್ದಾರಿಗಳು ಹೆಚ್ಚಾಗಬೇಕಾಗಿದೆ ಎಂದು ತಿಳಿಸಿದರು.
ನಗರ ಪಾಲಿಕೆ ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ನಗರಪಾಲಿಕೆ ಆರೋಗ್ಯ ಅಧಿಕಾರಿ ಡಾ.ವೆಂಕಟೇಶ್, ಮುಖಂಡ ಜಯಂತ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.