ಕಾರವಾರ: ಜಿಲ್ಲೆಯ 10 ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಸಮಿತಿಗಳ ಅಽಕಾರಾವಧಿ ಮುಕ್ತಾಯ ಹಂತದಲ್ಲಿದೆ. ಆದರೆ, ಸದ್ಯ ಆಡಳಿತಾಧಿಕಾರಿ ನೇಮಕಕ್ಕೆ ಹೈಕೋರ್ಟ್ ತಡೆ ಇದೆ.
ಶಿರಸಿ ಹಾಗೂ ದಾಂಡೇಲಿ ನಗರಸಭೆಯ ಆಡಳಿತ ಸಮಿತಿ ಅಧಿಕಾರಾವಧಿ ಶುಕ್ರವಾರ ಮುಕ್ತಾಯವಾಗಿದೆ. ಕಾರವಾರ ನಗರಸಭೆ ಹಾಗೂ ಅಂಕೋಪ ಪುರಸಭೆಯ ಆಡಳಿತ ಸಮಿತಿಯ ಅವಧಿ ನವೆಂಬರ್ -1 ಕ್ಕೆ ಮುಕ್ತಾಯವಾಗಲಿದೆ. ಮುಂಡಗೋಡ ಪಂಪಂ -ನ.2, ಹಳಿಯಾಳ ಹಾಗೂ ಕುಮಟಾ ಪುರಸಭೆಯ ಸಮಿತಿಗಳ ಅವಧಿ -ನ.3, ಭಟ್ಕಳ ಪುರಸಭೆ -ನ.5, ಹೊನ್ನಾವರ ಪಪಂ - ನ.7 ಹಾಗೂ ಸಿದ್ದಾಪುರ ಪಪಂ ಆಡಳಿತ ಸಮಿತಿಯ ಅವಧಿಯು ನವೆಂಬರ್ 9 ಕ್ಕೆ ಮುಕ್ತಾಯವಾಗಲಿದೆ. ಮಂಕಿ ಪಪಂಗೆ ಚುನಾವಣೆಯೇ ಆಗಿಲ್ಲ. ಜಾಲಿ ಪಟ್ಟಣ ಪಂಚಾಯಿತಿ ಅವಧಿ ಇನ್ನಷ್ಟು ದಿನವಿದೆ.
ಆಡಳಿತ ಸಮಿತಿಯ ಅಧಿಕಾರಾವಧಿ ಮುಗಿಯುತ್ತಿದ್ದಂತೆ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿ ಅವರು ಪೌರಾಡಳಿತ ಕಾಯ್ದೆಯಂತೆ ಸ್ಥಳೀಯ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ಮಾಡಬೇಕು. ಆದರೆ, ಈ ವಿಷಯ ವಿವಿಧ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಆಡಳಿತಾಧಿಕಾರಿ ನೇಮಕಕ್ಕೆ ತಡೆಯೂ ಇರುವುದರಿಂದ ನ್ಯಾಯಾಲಯ ಹಾಗೂ ಸರ್ಕಾರದ ಆದೇಶಕ್ಕೆ ಕಾಯಲಾಗುತ್ತಿದೆ ಎಂದು ಜಿಲ್ಲಾಽಕಾರಿ ಕಚೇರಿಯ ಮೂಲಗಳು ತಿಳಿಸಿವೆ.
ನ್ಯಾಯಾಲಯಕ್ಕೆ ಹೋಗಿದ್ದೇಕೆ..?
ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಸಮಿತಿ ಸದಸ್ಯರ ಅಧಿಕಾರಾವಧಿ 5 ವರ್ಷಗಳು. ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರಾವಧಿ ಎರಡುವರೆ ವರ್ಷಗಳಾಗಿವೆ. ಆದರೆ ಹಾಲಿ ಆಡಳಿತದಲ್ಲಿರುವ ಸಮಿತಿಗಳ ಸದಸ್ಯರು ಚುನಾಯಿತರಾಗಿ 7 ವರ್ಷಗಳೇ ಕಳೆದಿವೆ. ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಘೋಷಣೆಗೆ ಸರ್ಕಾರ ವಿಳಂಬ ಮಾಡಿದ್ದರಿಂದ ಎರಡು ವರ್ಷ ಹೆಚ್ಚು ಅಧಿಕಾರಾವಧಿ ಸಿಕ್ಕಿದೆ. ಎರಡನೇ ಅವಽಯಲ್ಲೂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಘೋಷಣೆಗೆ ಸರ್ಕಾರ ಮತ್ತಷ್ಟು ವಿಳಂಬ ಮಾಡಿತ್ತು. ಹಾಗಾಗಿ ಹಾಲಿ ಅಧ್ಯಕ್ಷ, ಉಪಾಧ್ಯಕ್ಷರು ರಾಜ್ಯಾದ್ಯಂತ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಮಗೆ ಸಂಪೂರ್ಣ ಎರಡುವರೆ ವರ್ಷ ಅಧಿಕಾರ ಸಿಗುವಂತೆ ಆದೇಶ ಮಾಡಬೇಕು ಎಂದು ವಾದ ಮಂಡಿಸಿದ್ದಾರೆ. ಈ ವಿಚಾರ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿದೆ.