ಬೆಂಗಳೂರು: ಶ್ರೀರಾಮಚಂದ್ರ ಅವತರಿಸಿದ ಶ್ರೀರಾಮನವಮಿಯನ್ನು ದೇಶಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಅದರಲ್ಲೂ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ನಂತರ ಭಕ್ತರ ಭಕ್ತಿ ಮತ್ತು ಆಚರಣೆಗೆ ಮತ್ತಷ್ಟು ಮೆರಗು ಬಂದಿದೆ. ಅಂತೆಯೇ ಉದ್ಯಾನ ನಗರಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಶ್ರೀರಾಮ ನವಮಿ ಸಂಭ್ರಮ ಮನೆಮಾಡಿದೆ. ನಗರದಾದ್ಯಂತ ಭಾನುವಾರ ಶ್ರೀರಾಮನವಮಿಯ ಸಂಭ್ರಮ ಮನೆ ಮಾಡಲಿದ್ದು, ದೇವಾಲಯಗಳು ತಳಿರು ತೋರಣ, ವಿದ್ಯುತ್ ದೀಪಾಲಂಕರಗಳಿಂದ ಕಂಗೊಳಿಸುತ್ತಿವೆ. ಅದರಲ್ಲೂ ವಿಶೇಷವಾಗಿ ಶ್ರೀರಾಮ ಮತ್ತು ಆಂಜನೇಯನ ದೇವಾಲಯಗಳಲ್ಲಿ ಶನಿವಾರದಿಂದಲೇ ಜನಜಂಗುಳಿ ಕಂಡು ಬರುತ್ತಿದೆ. ಬೆಳಗ್ಗೆ ದೇವರಿಗೆ ಅಭಿಷೇಕ, ವಿಶೇಷ ಹೂವಿನ ಅಂಲಕಾರ ಹಾಗೂ ಪೂಜೆ ಮತ್ತು ಹೋಮ-ಹವನಗಳನ್ನು ಮತ್ತಿತರ ಧಾರ್ಮಿಕ ಆಚರಣೆಗಳನ್ನು ಆಯೋಜಿಸಲಾಗಿದೆ. ದೇವಾಲಯಗಳು ಸೇರಿ ಬಡಾವಣೆಗಳಲ್ಲಿ ವಿವಿಧ ಹಿಂದುಪರ ಸಂಘಟನೆಗಳು ರಸ್ತೆಗಳಲ್ಲಿ ಪೆಂಡಾಲ್ ಹಾಕಿ ರಾಮನವಮಿಯನ್ನು ಆಚರಿಸುತ್ತಿದ್ದು, ಭಜನೆ, ನೃತ್ಯ, ಸಂಗೀತೋತ್ಸವ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಹಾಗೂ ಎಲ್ಲೆಡೆ ಪಾನಕ, ಕೋಸಂಬರಿ, ಮಜ್ಜಿಗೆ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ರಾಮನವಮಿ ಭಾನುವಾರ ಇರುವುದರಿಂದ ಆಚರಣಗೆ ಮತ್ತಷ್ಟು ಮೆರಗು ಬಂದಿದೆ.
ನಗರದ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯ, ಹನುಮಂತ ನಗರದ ಶ್ರೀ ರಾಮಾಂಜನೇಯ ಗುಡ್ಡ, ಜಯನಗರದ ಶ್ರೀ ಪಟ್ಟಾಭಿರಾಮ ಸೇವಾ ಮಂಡಳಿ, ರಾಗಿಗುಡ್ಡ ಆಂಜನೇಯ, ಮಹಾಲಕ್ಷ್ಮೀ ಬಡಾವಣೆಯ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ, ರಾಜಾಜಿನಗರದ ಶ್ರೀರಾಮಮಂದಿರ, ಮಿಂಟೋ ಆಂಜನೇಯ, ವಿಜಯನಗರದ ಮಾರುತಿ ಮಂದಿರ, ಮಾರುಕಟ್ಟೆ ಬಳಿಯ ಕೋಟೆ ಆಂಜನೇಯ, ಕೊಟ್ಟಿಗೆಪಾಳ್ಯದ ಶ್ರೀ ರಾಮದೇವಾಲಯ, ಟಿ. ದಾಸರಹಳ್ಳಿಯ ಶ್ರೀರಾಮಮಂದಿರ, ಸುಂಕದಕಟ್ಟೆಯ ಬೋಡುಬಂಡೆ ಆಂಜನೇಯ ಸ್ವಾಮಿ ದೇವಾಲಯ, ಮೈಸೂರು ಬ್ಯಾಂಕ್ ವೃತ್ತ ಯಲಹಂಕ ಗೇಟ್ ಆಂಜನೇಯ, ತಿಂಡ್ಲು ಸತ್ಯಮೂರ್ತಿ ಶನೇಶ್ವರದ ದೇವಾಲಯದ ಆಂಜನೇಯ ಸೇರಿ ನಗರದ ಹಲವು ದೇವಾಲಯಗಳಲ್ಲಿ ವಿಶೇಷ ಹೂವಿನ ಅಲಂಕಾರ, ಪೂಜೆ, ರಾಮತಾರಕ ಹೋಮ ನಡೆಯಲಿವೆ.
ರಾಮನವಮಿ ಹಿನ್ನೆಲೆಯಲ್ಲಿ ಶನಿವಾರ ಕೆ.ಆರ್. ಮಾರುಕಟ್ಟೆ ಸೇರಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಸೌತೆಕಾಯಿ, ಕರಬೂಜ, ನಿಂಬೆಹಣ್ಣು ಯತೇಚ್ಛವಾಗಿ ಮಾರಾಟವಾಗಿದ್ದು, ಹೂ, ಹಣ್ಣು, ತರಕಾರಿ ಖರೀದಿ ನಡೆದಿದೆ. ಸೌತೆಕಾಯಿಗೆ ಬೇಡಿಕೆ ಹೆಚ್ಚಾಗಿದ್ದು, ಕೆಲವೆಡೆ ಕೆ.ಜಿ.ಗೆ 40 -50 ರೂ. ನಂತೆ ಮಾರಿದರೆ, ಇನ್ನೂ ಕೆಲವೆಡೆ ಒಂದು ಕಾಯಿಗೆ 10-15 ರೂ.ನಂತೆ ಮಾರಾಟವಾಗಿದೆ. ಪಾನಕಕ್ಕೆ ಬಳಸುವ ನಿಂಬೆಹಣ್ಣಿಗೂ ಬೇಡಿಕೆ ಹೆಚ್ಚಾಗಿದೆ.
ಶ್ರೀ ಅಭಯ ಲಕ್ಷ್ಮೀ ನರಸಿಂಹ ಮತ್ತು ಶ್ರೀ ಪಟ್ಟಾಭಿರಾಮ ದೇವಸ್ಥಾನ ಹಾಗೂ ಶ್ರೀ ಅಭಯ ಲಕ್ಷ್ಮೀ ನರಸಿಂಹ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ಶ್ರೀ ರಾಮನವಮಿ ಮಹೋತ್ಸವ ಆಯೋಜಿಸಲಾಗಿದೆ. ರಾಮನವಮಿ ಪ್ರಯುಕ್ತ ಅಭಿಷೇಕ, ರಾಮತಾರಕ ಹೋಮ, ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ತೀರ್ಥ ಪ್ರಸಾದ ವಿನಿಯೋಗ ಇರಲಿದೆ. ಸಂಜೆ 6 ಗಂಟೆಗೆ ರಾಜಬೀದಿ ರಥೋತ್ಸವ ವಿಜೃಂಬಣೆಯಿಂದ ಸಾಗಲಿದೆ. ರಾತ್ರಿ 8ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಗುವುದು.