ಮಂಡ್ಯ: ಮೂರು ದಶಕದ ಬಳಿಕ ಮಂಡ್ಯಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಸಿಕ್ಕಿದೆ. ಆದ್ದರಿಂದ ಎಲ್ಲರೂ ಸೇರಿ ಅದ್ಧೂರಿಯಾಗಿ ಆಚರಣೆ ಮಾಡೋಣ. ಈ ಸಂಬಂಧ ಸಿದ್ಧತೆ ಮಾಡಿಕೊಳ್ಳಬೇಕು. ಮುಖ್ಯವಾಗಿ ಸಮ್ಮೇಳನ ನಡೆಯುವ ದಿನಗಳಲ್ಲಿ ಇಡೀ ನಗರ ಮಧುವಣಗಿತ್ತಿಯಂತೆ ಶೃಂಗಾರಗೊಳ್ಳಬೇಕು ಎಂದು ನಗರ ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರ ಸಮಿತಿ ಅಧ್ಯಕ್ಷರೂ ಆದ ಶಾಸಕ ರವಿಕುಮಾರ್ ಗಣಿಗ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಗರ ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ನಗರ, ನಮ್ಮ ಶೃಂಗಾರ ಎನ್ನುವಂತೆ ವಿದ್ಯುತ್ ದೀಪಾಲಂಕಾರ ಹಾಗೂ ತಳಿರು ತೋರಣಗಳಿಂದ ಅಲಂಕಾರ ಮಾಡಬೇಕು ಎಂದರು.
ನಗರದ ಯಾವ ಯಾವ ಸ್ಥಳದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಬೇಕು, ಎಷ್ಟು ಕಿಲೋ ಮೀಟರ್ ಮಾಡಬೇಕು. ಆಯಕಟ್ಟಿನ ಸ್ಥಳದಲ್ಲಿ ಭಿತ್ತಿ ಚಿತ್ರಗಳು, ಗೋಡೆ ಬರಹಗಳು, ತಳಿರು ತೋರಣ ಹಾಕಬೇಕು. ಸರ್ಕಾರದ ಎಲ್ಲ ಕಟ್ಟಡಗಳ ಮೇಲೆ ವಿದ್ಯುತ್ ದೀಪಾಲಂಕಾರ ಮಾಡಬೇಕು. ಅದರಂತೆ ಖಾಸಗಿ ಕಟ್ಟಡಗಳ ಮೇಲೆ ದೀಪಾಲಂಕಾರ ಮಾಡುವಂತೆ ವರ್ತಕರ ಸಂಘಕ್ಕೆ ಮನವಿ ಮಾಡಲಾಗುವುದು. ಸಮಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಉಪ ಸಮಿತಿಗಳನ್ನು ರಚಿಸಿ ಜವಾಬ್ದಾರಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಮನೆ ಮುಂದೆ ರಂಗೋಲಿ, ದೀಪ, ಮನೆ ಮೇಲೆ ಕನ್ನಡದ ಬಾವುಟ ಹಾಕುವುದರ ಜತೆಗೆ ಶೃಂಗಾರವನ್ನು ಮಾಡಬೇಕು. ಈ ನಿಟ್ಟಿನಲ್ಲಿ ನಗರದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಮಾತನಾಡಿ, ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಜಿಲ್ಲೆಯ ಪ್ರಮುಖ ಕವಿಗಳ ಭಾವಚಿತ್ರವನ್ನು ವಿದ್ಯುತ್ ದೀಪಗಳಿಂದ ಅಲಂಕರಣಗೊಳಿಸಬೇಕು. ಇದರಿಂದ ಸಮ್ಮೇಳನದ ಮೆರಗು ಇನ್ನಷ್ಟು ಹೆಚ್ಚಲಿದೆ ಎಂದು ಅಭಿಪ್ರಾಯ ನೀಡಿದರು.
ಸಭೆಯಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಹೀಮ್, ನಗರಸಭೆ ಇಂಜಿನಿಯರ್ ರವಿಕುಮಾರ್, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಸಮಿತಿ ಸದಸ್ಯರಾದ ಮಹಾಲಿಂಗಯ್ಯ, ಚಂದ್ರಶೇಖರ್, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಬಿ.ಎಂ.ಅಪ್ಪಾಜಪ್ಪ, ದರಸಗುಪ್ಪೆ ಧನಂಜಯ, ಚಂದ್ರಲಿಂಗು, ಸುಜಾತಾ ಕೃಷ್ಣ, ಸುವರ್ಣಾವತಿ ಇತರರಿದ್ದರು