ಜಿಲ್ಲೆ

ಡಿಸಿ ಅಧ್ಯಕ್ಷತೆಯಲ್ಲಿ ನಗರಸಭೆ ಸಾಮಾನ್ಯ ಸಭೆ

ಮಡಿಕೇರಿ:

ಮಡಿಕೇರಿ ನಗರಸಭೆಯಲ್ಲಿ ಖಾತೆ ಸಮಸ್ಯೆ ಸಂಬAಧ ಪರಿಶೀಲನೆ ನಡೆಸಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಕಾನೂನು ಬದ್ಧವಾಗಿ ಪರಿಹರಿಸಲಾಗುವುದು ಎಂದು ನಗರಸಭಾ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು. ಶುಕ್ರವಾರ ನಡೆದ ನಗರಸಭೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರಸಭೆಯಲ್ಲಿ ಖಾತೆ ಮಾಡಿಕೊಡುವುದಕ್ಕೆ ಸಂಬAಧಿಸಿದAತೆ ಸತಾಯಿಸಲಾಗುತ್ತಿದೆ ಎಂದು ಸರ್ವ ಸದಸ್ಯರೂ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ರಾಜೇಶ್ ಯಲ್ಲಪ್ಪ. ಅಮೀನ್ ಮೊಹಿಸಿನ್, ಮಹೇಶ್ ಜೈನಿ, ರಮೇಶ್ ಅಧಿಕಾರಿಗಳ ಕಾರ್ಯವೈಖರಿಯನ್ನು ಕಟು ಶಬ್ದಗಳಿಂದ ಟೀಕಿಸಿದರು. ಖಾತೆ ಮಾಡಿಸಲು ಬಂದವರನ್ನು ಯಾವ್ಯಾವುದೋ ಕಾನೂನು ಹೇಳಿ ವಿನಾ ಕಾರಣ ತೊಂದರೆ ಕೊಡಲಾಗುತ್ತಿದೆ. ಅಧಿಕಾರಿಗಳಿಂದ ದುರುದ್ದೇಶಿತಪೂರಿತ ವರ್ತನೆ ಕಂಡುಬರುತ್ತಿದೆ. ನಗರಸಭೆ ಆಯುಕ್ತರಿಗೆ ಯಾರೋ ಒಬ್ಬರ ಮೇಲಿನ ವ್ಯಯಕ್ತಿಕ ದ್ವೇಷವಿದ್ದು, ಈ ಕಾರಣಕ್ಕೆ ಬಡವರ ಕಡತವೂ ಪೆಂಡಿAಗ್ ಇಡಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಬಿಗಡಾಯಿಸುತ್ತಿರುವುದರಿಂದ ಕಾವೇರಿ ಕಲಾಕ್ಷೇತ್ರ ಪುನರ್‌ನಿರ್ಮಾಣ ಸಂದರ್ಭ ಪಾರ್ಕಿಂಗ್‌ಗೆ ಹೆಚ್ಚಿನ ಜಾಗ ಮೀಸಲಿಡುವ ಅಗತ್ಯವಿದೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಹೇಳಿದರು. ಹಾಲಿ ಡಿಪಿಆರ್ ಪ್ರಕಾರ ಇಲ್ಲಿ ಒಂದು ಹಂತದ ಪಾರ್ಕಿಂಗ್‌ಗೆ ಮಾತ್ರ ಅವಕಾಶವಿದೆ. ಆದರೆ ಇದನ್ನು 2 ಹಂತದ ಪಾರ್ಕಿಂಗ್‌ಗೆ ವಿಸ್ತರಿಸಿದರೆ ಸುಮಾರು 250ಕ್ಕೂ ಹೆಚ್ಚು ಕಾರುಗಳನ್ನು ನಿಲ್ಲಿಸಲು ಸ್ಥಳಾವಕಾಶ ಆಗುತ್ತದೆ ಎಂದು ಸಲಹೆ ನೀಡಿದರು.
ಇದಕ್ಕೂ ಮೊದಲು ಸಭೆ ಆರಂಭವಾಗುತ್ತಿದ್ದAತೆಯೇ ಎಸ್‌ಡಿಪಿಐನ ಅಮೀನ್ ಮೊಹಿಸಿನ್ ನಿಯಮ ಉಲ್ಲಂಘಿಸಿ ಈ ಸಭೆ ಕರೆಯಲಾಗಿದೆ ಎಂದು ಆಕ್ಷೇಪಿಸಿದರು. ಜಿಲ್ಲಾಧಿಕಾರಿಗೆ ಅವಮಾನ ಮಾಡಲೆಂದೇ ಆಯುಕ್ತರು ಈ ಸಭೆ ಕರೆದಂತಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಇನ್ನು ಮುಂದೆ ಈ ರೀತಿ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈ ಬಗ್ಗೆ ತನಿಖೆಯನ್ನೂ ನಡೆಸಲಾಗುವುದು ಎಂದು ಹೇಳಿದರು.
ಜಮಾ-ಖರ್ಚಿಗೆ ಅನುಮೋದನೆ ಪಡೆಯುವ ಸಂದರ್ಭ 10 ತಿಂಗಳ ಜಮಾ-ಖರ್ಚು ವಿವರ ಒಮ್ಮೆಲೇ ನೀಡಿದರೆ ನೋಡಲು ಕಷ್ಟ ಆಗುತ್ತದೆ. ಇದಕ್ಕಾಗಿ ವಿಶೇಷ ಸಭೆ ಕರೆಯಬೇಕು ಎಂದು ಅಮೀನ್ ಮೊಹಿಸಿನ್ ಒತ್ತಾಯಿಸಿದರು. ಈ ಹಿಂದೆ ಈ ರೀತಿ ಆಗಿ ಅವ್ಯವಹಾರಕ್ಕೆ ಅವಕಾಶ ಕೊಟ್ಟಂತಾಗಿತ್ತು ಎಂದರು. ಆದರೆ ಬಿಜೆಪಿ ಸದಸ್ಯರು ಇದಕ್ಕೆ ಆಕ್ಷೇಪಿಸಿದರು. ಜಮಾ - ಖರ್ಚಿಗೆ ಈಗ ಅನುಮೋದನೆ ಕೊಡೋಣ. ಇದರ ಬಗ್ಗೆ ಆಕ್ಷೇಪಗಳು ಇದ್ದರೆ ಮತ್ತೆ ಚರ್ಚಿಸೋಣ ಎಂದು ಹೇಳಿ ಅನುಮೋದನೆಗೆ ಅವಕಾಶ ಮಾಡಿಕೊಟ್ಟರು.

ದಸರಾ ಹಿನ್ನೆಲೆಯಲ್ಲಿ ದುರಸ್ತಿ ಮಾಡಲಾಗುತ್ತಿರುವ ರಸ್ತೆಗಳನ್ನು ಈ ಹಿಂದೆ ನಗರೋತ್ಥಾನ ಯೋಜನೆ ಆಡಿಯಲ್ಲಿ ನಿರ್ಮಿಸಲಾಗಿತ್ತು. ಈಗ ಮತ್ತೆ ಅದೇ ಜಾಗಕ್ಕೆ ಹಣ ಸುರಿಯುವ ಬದಲು ಸಂಬAಧಿಸಿದ ಗುತ್ತಿಗೆದಾರರಿಂದಲೇ ಸರಿಪಡಿಸಿದರೆ ಉತ್ತಮ ಎನ್ನುವ ಅಭಿಪ್ರಾಯ ಎಸ್‌ಡಿಪಿಐನ ಸದಸ್ಯರಿಂದ ವ್ಯಕ್ತವಾಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ನಗರೋತ್ಥಾನ ಕಾಮಗಾರಿಗಳು ಎಲ್ಲಾ ಕಡೆಗಳಲ್ಲಿ ಪೂರ್ಣಗೊಂಡಿಲ್ಲ. ಹಾಗಾಗಿ ದಶಮಂಟಪ ಮತ್ತು ಕರಗಗಳು ಸಂಚರಿಸುವ ರಸ್ತೆಗಳ ದುರಸ್ತಿ ಆಗಬೇಕಿದೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಆಡಳಿತಾಧಿಕಾರಿ, ಗುಣಮಟ್ಟದ ಕಾಮಗಾರಿ ನಡೆಸುವಲ್ಲಿ ನಗರಸಭಾ ಸದಸ್ಯರ ಜವಾಬ್ದಾರಿಯೂ ಇದೆ. ಕಾಮಗಾರಿ ನಡೆಯುವ ಸಂದರ್ಭ ನಿಂತು ಕೆಲಸ ಮಾಡಿಸಬೇಕು. ಆಗ ಗುಣಮಟ್ಟದ ಕಾಮಗಾರಿ ನಡೆಯುತ್ತದೆ ಎಂದು ಸಲಹೆ ನೀಡಿದರು.

ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ ಬಗ್ಗೆ ನಾಮನಿರ್ದೇಶಿತ ಸದಸ್ಯರು ಗಮನ ಸೆಳೆದರು. ಇದಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿದರು. ಸಮಸ್ಯೆಗಳ ಬಗ್ಗೆ ಕರೆ ಮಾಡಿದರೆ ಗುತ್ತಿಗೆದಾರರು ಕರೆಯನ್ನೇ ಸ್ವೀಕರಿಸುವುದಿಲ್ಲ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಆಡಳಿತಾಧಿಕಾರಿ, ಬೀದಿ ದೀಪಗಳ ಸಮಸ್ಯೆ ನನಗೂ ವ್ಯಯಕ್ತಿಕವಾಗಿ ಉಂಟಾಗಿದೆ. ಟೆಂಡರ್ ದಾಖಲೆಗಳನ್ನು ಪರಿಶೀಲಿಸಿದ ನಂತರ ಇಲ್ಲಿ ಗುತ್ತಿಗೆದಾರರ ತಪ್ಪು ಕಂಡು ಬಂದರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಹೇಳಿದರು.

ರಾಜಾಸೀಟ್‌ನಲ್ಲಿ ಪುಟಾಣಿ ರೈಲು ಮತ್ತೆ ಓಡಾಡುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಮನವಿ ಮಾಡಿದರು. ಇದಕ್ಕೆ ಧ್ವನಿ ಸೇರಿಸಿದ ಇತರ ಸದಸ್ಯರು ಪುಟಾಣಿ ರೈಲು ನಗರಸಭೆಯಿಂದ ತೋಟಗಾರಿಕೆ ಇಲಾಖೆಗೆ ವಹಿಸಲಾಗಿದೆ. ಇದನ್ನು ಮತ್ತೆ ನಗರಸಭೆಗೆ ಕೊಟ್ಟರೆ ಒಳ್ಳೆಯದು ಎಂದರು. ಈ ವೇಳೆ ಮಾತನಾಡಿದ ವೆಂಕಟ್‌ರಾಜಾ, ಪುಟಾಣಿ ರೈಲು ಸಂಚಾರ ಮತ್ತೆ ಆರಂಭಿಸಲು 1 ಕೋಟಿ ರೂ. ಅಗತ್ಯವಿದೆ. ಇದನ್ನು ನಗರಸಭೆ ಭರಿಸುವುದಾದರೆ ಪರಿಶೀಲಿಸುವುದಾಗಿ ಹೇಳಿದರು.

ಚುನಾಯಿತ ಸದಸ್ಯರ ವಾರ್ಡ್ಗಳಿಗೆ ಅನುದಾನ ಹಂಚಿಕೆ ಮಾಡಿದಂತೆ ತಮಗೂ ಅನುದಾನ ಕೊಡಬೇಕು ಎಂದು ನಾಮನಿರ್ದೇಶಿತ ಸದಸ್ಯರು ಬೇಡಿಕೆ ಮುಂದಿಟ್ಟರು. ಇದಕ್ಕೆ ಬಿಜೆಪಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಈ ವೇಳೆ ಕಾಂಗ್ರೆಸ್‌ನ ರಾಜೇಶ್ ಯಲ್ಲಪ್ಪ, ನಿಮಗೊಂದು ನ್ಯಾಯ? ನಮಗೊಂದು ನ್ಯಾಯನಾ ಎಂದು ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕಾಮಗಾರಿಗಳ ಬಗ್ಗೆ ಯಾರು ಬೇಕಾದರೂ ಸಲಹೆ ಕೊಡಬಹುದು. ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಪೌರಾಯುಕ್ತ ವಿಜಯ್, ಅಧಿಕಾರಿಗಳು, ಸಿಬ್ಬಂದಿ ಇದ್ದರು